ಬರ ಘೋಷಣೆ ಬೆನ್ನಲ್ಲೇ ಮಳೆಯ ಸಿಂಚನ

Rain-in-city
Published on

ಕಾರವಾರ/ಹೊನ್ನಾವರ: ಕಾಕತಾಳೀಯ ಎಂಬಂತೆ ರಾಜ್ಯ ಸರ್ಕಾರ ಬರ ಘೋಷಿಸಿದ ಬೆನ್ನಲ್ಲೇ ಮಳೆ ಬಿದ್ದಿದೆ. ಜಿಲ್ಲೆಯ ವಿವಿಧೆಡೆ ಗುರುವಾರ ಉತ್ತಮ ಮಳೆಯಾಗಿದೆ. ಬಿಸಿಲ ಝಳದಿಂದ ಬಳಲಿದ್ದ ಜನ ಸಮಾಧಾನಗೊಂಡಿದ್ದಾರೆ. ಗದ್ದೆಗಳಿಗೆ ನೀರಿಲ್ಲ ಎಂದು ಕೊರಗಿದ್ದ ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಜಿಲ್ಲೆಯ ಶಿರಸಿ, ಯಲ್ಲಾಪುರ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿ ವಿವಿಧೆಡೆ ಮಳೆಯಾಗಿದೆ. ಗುರುವಾರ ಜಿಲ್ಲೆಯ 9 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಸರ್ಕಾರ ಘೋಷಿಸಿತ್ತು.

ಕುಮಟಾದ ದೇವಗಿರಿ ಗ್ರಾಪಂ ವ್ಯಾಪ್ತಿಯಲ್ಲಿ 112.50 ಮಿಮೀ, ವಾಲ್ಗಳ್ಳಿಯಲ್ಲಿ 72.50 ಮಿಮೀ, ಮಳೆಯಾಗಿದೆ. ಹೊನ್ನಾವರದ ಕಾಸರಕೋಡಿನಲ್ಲಿ 75, ಕಡತೋಕಾದಲ್ಲಿ 74.50 ಮಿಮೀ ಮಳೆಯಾಗಿದೆ.

ಸೆ.17 ಹಾಗೂ 18 ರಂದು ಭಾರಿ ಮಳೆಯಾಗಬಹುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಯೆಲ್ಲೋ ಅಲರ್ಟ್ ನೀಡಲಾಗಿದೆ.

ಗಟಾರದ ನೀರು ರಸ್ತೆಗೆ:

ಹೊನ್ನಾವರ ಗುರುವಾರ ಸುರಿದ ಮಳೆಯ ಪರಿಣಾಮ ವಿವಿಧ ಭಾಗಗಳಲ್ಲಿ ಗಟಾರದ ನೀರು ರಸ್ತೆಗಳಲ್ಲಿ ತುಂಬಿ ಹರಿಯಿತು. ಬಸ್ ನಿಲ್ದಾಣದ ಮುಂಭಾಗದಲ್ಲಿ ಮಳೆಗಾಲ ಪೂರ್ವ ಮಾಡಬೇಕಿದ್ದ ಚರಂಡಿ ಸ್ವಚ್ಚತೆ ಸಮರ್ಪಕವಾಗಿ ನಡೆಯದೇ ಇರುದರಿಂದ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ರಸ್ತೆ ಹೊಂಡಕ್ಕೆ ಸಿಮೆಂಟ್ ಮಿಶ್ರಿತ ಜಲ್ಲಿ ತುಂಬಲು ಆಗಮಿಸಿದ ಪೌರಕಾರ್ಮಿಕರು ಗಟಾರದಲ್ಲಿ ಇಳಿದು ನೀರು ಸರಾಗವಾಗಿ ಹೋಗುವಂತೆ ಮಾಡಿದರು.

ಪ್ರತಿ ಮಳೆಗಾಲದಲ್ಲಿ ಗಟಾರದ ಅವ್ಯವಸ್ಥೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.  ಈ ಭಾಗದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿರುತ್ತಾರೆ. ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ನೂತನ ಬಸ್ ನಿಲ್ದಾ ಮಾಡಿದ್ದರೂ ಗಟಾರದ ಅವ್ಯವಸ್ಥೆ ಹಾಗೆಯೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net