

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಮಂಗಳವಾರ ಸಂಜೆ ಸುರಿದ ಧಾರಕಾರ ಮಳೆ ಬಿಸಿಲಿನ ಬೇಗೆ ತಣಿಸಿದ್ದು ಒಂದೆಡೆಯಾದರೆ, ರಸ್ತೆಗಳೆಲ್ಲ ಕರೆಗಳಂತಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
2-3 ದಿನಗಳ ಕಾಲ ಸಂಜೆ ಮೋಡ ಕವಿದ ವಾತಾವರಣ ಉಂಟಾಗಿದ್ದರೂ ಮಳೆ ಆಗಿರಲಿಲ್ಲ. ಮಂಗಳವಾರ ಸಂಜೆ 5 ಗಂಟೆ ಹೊತ್ತಿಗೆ ಗುಡುಗು-ಸಿಡಿಲಿನೊಂದಿಗೆ ಆರಂಭವಾದ ಮಳೆ ಸುಮಾರು 2 ಗಂಟೆ ಕಾಲ ಧಾರಾಕಾರವಾಗಿ ಸುರಿದ ಪರಿಣಾಮ ವಾತಾವರಣ ತಂಪಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು, ಸುರಿಯುತ್ತಿದ್ದ ಮಳೆಯಲ್ಲೇ ತಿರುಗಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಂಜೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಬಳಿಕ 5 ಗಂಟೆ ಹೊತ್ತಿಗೆ ಆರಂಭವಾದ ಮಳೆಯಿಂದ ಬೈಕ್ ಸವಾರರು ಮಳೆಯಲ್ಲಿ ನೆನೆಯುತ್ತಲೇ ಸಂಚರಿಸುತ್ತಿದ್ದರು. ಎನ್ಟಿಟಿಎಫ್ ಬಳಿ ಜಲಾವೃತಗೊಂಡ ಬಿಆರ್ಟಿಎಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಬಂದಾಗಿ ಸವಾರರು ಪರದಾಡಿದರು. ಕಾರು, ಬೈಕ್ಗಳು ಅರ್ಧ ರಸ್ತೆ ದಾಟುತ್ತಿದ್ದಂತೆ ತಾಂತ್ರಿಕ ದೋಷ ಕಂಡು ಬಂದು ಸ್ಥಗಿತವಾಗಿದ್ದವು.
ಸಂಚಾರ ವ್ಯತ್ಯಯ: ಸಂಜೆ ಸುರಿದ ಮಳೆಯಿಂದ ಎನ್ಟಿಟಿಎಫ್, ಟೋಲನಾಕಾ, ಕೆಎಂಎಫ್, ಹು-ಧಾ ಬೈಪಾಸ್ ಸೇರಿ ಇತರ ಕಡೆಗಳಲ್ಲಿನ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರದಲ್ಲಿ ಕೆಲ ಗಂಟೆಗಳ ಕಾಲ ವ್ಯತ್ಯಯ ಉಂಟಾಗಿತ್ತು. ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಹು-ಧಾ ಪ್ರಮುಖ ರಸ್ತೆಗಳೇ ಕೆರೆಗಳಂತಾಗಿದ್ದವು. ಹೀಗಾಗಿ ರಸ್ತೆ ಕಾಣದೆ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು. ಕೆಲ ಹೊತ್ತಿನ ಬಳಿಕ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಾಹನ ಸವಾರರಿಗೆ ಮಾರ್ಗದರ್ಶನ ಮಾಡುವ ಮೂಲಕ ಸಂಚಾರ ಸುಗಮಗೊಳಿಸಿದರು.