ಕರಾವಳಿಯಲ್ಲಿ ಭಾರಿ ಮಳೆ, ಮರವೂರು ಸೇತುವೆ ಸಂಪರ್ಕ ರಸ್ತೆಯಲ್ಲಿ ಬಿರುಕು, ಮನೆಗಳಿಗೆ ನುಗ್ಗಿದ ನೀರು

IMG-20220630-WA0001
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಗುರುವಾರ ಮುಂಜಾನೆಯಿಂದ ಎಡೆಬಿದಡೆ ಧಾರಾಕಾರ ಮಳೆ

ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಕ್ಕಳು ಶಾಲೆಗೆ ತೆರಳಲು ಕಷ್ಟಕರವಾದ, ದುರ್ಗಮ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಈಗಾಗಲೇ ಶಾಲೆಗಳಿಗೆ ತೆರಳಿರುವ ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಉಳಿಸಿಕೊಳ್ಳುವಂತೆ ಹಾಗೂ ಮನೆಗೆ ವಾಪಾಸ್‌ ಕಳುಹಿಸದಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳುವಂತೆ ಕ್ರಮ ತೆಗೆದುಕೊಳ್ಳುವಂತೆ ತಹಸೀಲ್ದಾರ್ ಮತ್ತು ಬಿಇಒಗಳುಗೆ ಸೂಚನೆ ನೀಡಲಾಗಿದೆ. ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ನಡುವೆ ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ನೀರು ಹರಿಯುವ ತೋಡಿನ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಹರಿದ ಹಿನ್ನೆಲೆಯಲ್ಲಿ ತೋಡುಗಳು ತುಂಬಿ ಹರಿದಿದ್ದು, ಹಲವಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿತ್ತು. ನಗರದ ಪಡೀಲ್, ಕಣ್ಣೂರು, ಅಡ್ಯಾರ್, ಮರೋಳಿ, ಮೊದಲಾದೆಡೆಗಳಲ್ಲಿ ಹೆದ್ದಾರಿಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಕಾವೂರು ಗಾಂಧಿ ನಗರದಲ್ಲಿ ತೋಡು ಒಡೆದು ಹಲವು ಮನೆಗಳಿಗೆ ನೀರು ನುಗ್ಗಿದೆ.

ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮರವೂರು ಸೇತುವೆಯ ಬಟ್ಟೆ ಭಾಗದ ರಸ್ತೆ ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ.

ಪಡೀಲು ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. ನೀರುಮಾರ್ಗ ಬದನಡಿ ಕ್ಷೇತ್ರ ಸಂಪೂರ್ಣ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net