

ಬೆಂಗಳೂರು: ಭರಣಿ ಮಳೆ ಪೂರ್ಣಗೊಂಡು ಕೃತ್ತಿಕಾ ಮಳೆ ಅಡಿಯಿಡುತ್ತಿದ್ದಂತೆ ನಗರದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಸೋಮವಾರದಿಂದ ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ವರ್ಷಧಾರೆಯಾಗಲಿದೆ. ಕೆಲವೊಂದು ಪ್ರದೇಶದಲ್ಲಿ ಸಣ್ಣ ಪ್ರಮಾಣದ ಬಿರುಗಾಳಿಯೂ ಬೀಸಬಹುದು. ಸಂಜೆ ಹಾಗೂ ರಾತ್ರಿ ವೇಳೆ ಮಳೆ ಸುರಿಯುವ ಕಾರಣ ಜನರು ಎಚ್ಚರಿಕೆಯಿಂದ ಇರುವಂತೆ ಬಿಬಿಎಂಪಿ ಮನವಿ ಮಾಡಿದೆ.
ಸತತ ಮಳೆಯಿಂದ ನಗರದಲ್ಲಿ ಗರಿಷ್ಠ ಉಷ್ಣಾಂಶ ತುಸು ಇಳಿಕೆ ಕಂಡಿದೆ. ಭಾನುವಾರ ಗರಿಷ್ಠ ತಾಪಮಾನ 33.6 ಡಿ. ಸೆ. ಹಾಗೂ ಕನಿಷ್ಠ ಉಷ್ಣಾಂಶ 24 ಡಿ. ಸೆ. ದಾಖಲಾಗಿತ್ತು.
ಎಂಪ್ರಿ ಬಳಿ 38 ಮಿ.ಮೀ. ಮಳೆ:
ಭಾನುವಾರ ಸಂಜೆ ನಗರದ ಬಹುತೇಕ ಭಾಗಗಳಲ್ಲಿ ಮೋಡ ಮುಸುಕಿದ ವಾತಾವರಣ ಕಂಡರೂ, ದಕ್ಷಿಣ ಭಾಗ ಸೇರಿ ಸೀಮಿತ ಪ್ರದೇಶಗಳಲ್ಲಿ ಮಾತ್ರ ಮಳೆಯಾಗಿದೆ. ಬನ್ನೇರುಘಟ್ಟ ರಸ್ತೆಯ ಎಂಪ್ರಿ (ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆ) ಬಳಿ ಅತೀ ಹೆಚ್ಚು 38 ಮಿ.ಮೀ. ಪ್ರಮಾಣದ ವರ್ಷಧಾರೆಯಾಯಿತು. ಬಿಟಿಎಂ ಲೇಔಟ್, ಬಸವನಗುಡಿ, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ಮೈಸೂರು ರಸ್ತೆ ಸೇರಿ ಹಲವೆಡೆ ಸಾಧಾರಣ ಪ್ರಮಾಣದ ಮಳೆ ಸುರಿಯಿತು.
ಇದರ ಹೊರತಾಗಿಯೂ ತಡರಾತ್ರಿಯೂ ನಗರದ ಹಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಯಿತು.
ಟೊಂಗೆ ತೆರವು ನಿಧಾನ:
ಕಳೆದ ವಾರದಿಂದೀಚಿಗೆ ನಗರದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಗೆ 700ಕ್ಕೂ ಹೆಚ್ಚು ಮರ, ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ. ಇವುಗಳಲ್ಲಿ ಬಹುತೇಕ ಮರದ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಆದರೂ, ಅಲ್ಲಲ್ಲಿ ಒಳ ರಸ್ತೆಗಳಲ್ಲಿ ನೆಲಕ್ಕೆ ಬಿದ್ದಿರುವ ಟೊಂಗೆಗಳನ್ನು ಕತ್ತರಿಸಿ ರಸ್ತೆಬದಿಗೆ ಹಾಕಿರುವುದನ್ನು ತೆರವು ಮಾಡಿಲ್ಲ. ಗಂಭೀರ ಸಮಸ್ಯೆ ಆಗಿರುವ ಕಡೆಗಳಲ್ಲಿ ಮೊದಲ ಆದ್ಯತೆ ನೀಡಿರುವುದರಿಂದ ರೆಂಬೆ, ಕೊಂಬೆ ಬಿದ್ದಿರುವುದನ್ನು ತೆರವುಗೊಳಿಸಲು ಸ್ವಲ್ಪ ವಿಳಂಬವಾಗಿದೆ. ಇಲ್ಲೂ ಸಹ ತ್ವರಿತವಾಗಿ ಸಿಬ್ಬಂದಿ ನಿಯೋಜಿಸಿ ತೆರವು ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಮಳೆ (ಮಿ.ಮೀ.ಗಳಲ್ಲಿ)?:
ಬಿಟಿಎಂ ಲೇಔಟ್-31
ಬೊಮ್ಮನಹಳ್ಳಿ-26
ಅರಸೀಕೆರೆ-25
ಸಿಂಗಸಂದ್ರ-22
ವಿದ್ಯಾಪೀಠ-14
ನಾಯಂಡಹಳ್ಳಿ-13
ಆರ್.ಆರ್.ನಗರ- 11