ವರುಣನ ಆರ್ಭಟಕ್ಕೆ ಬೆಚ್ಚಿದ ಬೆಂಗಳೂರು- ತೇಲಿ ಹೋದವು ಕಾರುಗಳು

rajakaluve drain
Published on

ಬೆಂಗಳೂರು: ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ 10ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿವೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಬೆಳಗ್ಗೆ ಶಾಂತವಾಗಿದ್ದ ಮಳೆರಾಯ ಸಂಜೆ 4 ಗಂಟೆ ನಂತರ ಭಾರಿ ಪ್ರಮಾಣದಲ್ಲಿ ಸುರಿದಿದೆ. ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ರಾಜಧಾನಿಯ ಜನರು ಬೆಚ್ಚೀಬಿಳುವಂತಾಗಿದೆ. ಮಳೆಯ ಪರಿಣಾಮ ಬೆಂಗಳೂರಿನ ಎಲ್ಲೆಡೆ ಉಂಟಾಗಿದ್ದು, 10ಕ್ಕೂ ಹೆಚ್ಚಿನ ಬಡಾವಣೆಗಳು, ನೂರಾರು ಮಳೆಗಳು ಜಲಾವೃತವಾಗುವಂತಾಗಿದೆ.

ಬೆಳಗ್ಗೆ ಖಾಲಿ ಮಾಡಿದ ನೀರು, ಸಂಜೆ ತುಂಬಿತು: ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ, ನಗರದ ಹಲವೆಡೆ 200ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಮನೆ ಒಳಗೆ ಬಂದಿದ್ದ ನೀರನ್ನು, ಶುಕ್ರವಾರ ಬೆಳಗ್ಗೆ ತೆರವು ಮಾಡಲಾಗಿತ್ತು. ಆದರೆ, ಸಂಜೆ ಮತ್ತೆ ಭಾರಿ ಮಳೆಯಾದ ಪರಿಣಾಮ ನೀರು ಖಾಲಿ ಮಾಡಿದ್ದ ಕಟ್ಟಡಗಳಿಗೆ ಮತ್ತೆ ನುಗ್ಗಿದೆ. ಹೀಗಾಗಿ ಜನರು ನೀರು ಖಾಲಿ ಮಾಡುವ ಕೆಲಸದಲ್ಲಿಯೇ ನಿರತರಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನರಕವಾಗಿಸಿದ ರಾಜಕಾಲುವೆ: ಹೊಸಕೆರೆಹಳ್ಳಿ ಗುರುದತ್ತ ಲೇಔಟ್​ನಲ್ಲಿ ರಾಜಕಾಲುವೆ ಕುಸಿದು ಮೂರು ದಿನಗಳಾದರೂ, ಇನ್ನೂ ಸರಿಪಡಿಸಿಲ್ಲ. ನಿರಂತರ ಮಳೆಯಾಗುತ್ತಿರುವ ಕಾರಣ, ರಾಜಕಾಲುವೆ ದುರಸ್ತಿ ಕಾಮಗಾರಿ ನಡೆಸಲಾಗುತ್ತಿಲ್ಲ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ಮಾತು. ಆದರೆ, ಇದೇ ರಾಜಕಾಲುವೆ ಇದೀಗ ಗುರುದತ್ತ ಲೇಔಟ್​, ದತ್ತಾತ್ರೇಯನಗರ, ಇಟ್ಟಮಡು ಸೇರಿ ಇನ್ನಿತರ ಬಡಾವಣೆಗಳ ಜನರ ಜೀವನ ನರಕವಾಗಿಸಿದೆ. ಈ ಭಾಗದಲ್ಲಿಯೇ 100ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಶುಕ್ರವಾರ ಸಂಜೆಯಿಂದ ಆ ಬಡಾವಣೆಗಳ ಸುತ್ತಲಿನ ಮನೆಗಳು ಜಲಾವೃತವಾಗಿ ನೆಮ್ಮದಿಯಿಲ್ಲದಂತಾಗಿದೆ.

ಮನೆಗಳು ಜಲಾವೃತ: ಮಳೆಯ ಪರಿಣಾಮ ನಗರದ ವಿವಿಧ ಬಡಾವಣೆಗಳಲ್ಲಿನ 200ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಪುಟ್ಟೇನಹಳ್ಳಿ, ಕೋಣನಕುಂಟೆ, ಚಿಕ್ಕಲಸಂದ್ರ, ಜೆ.ಪಿ.ನಗರ, ಕುಮಾರಸ್ವಾಮಿ ಲೇಔಟ್​, ಇಟ್ಟಮಡು, ದತ್ತಾತ್ರೇಯನಗರ, ಪ್ರಮೋದ್​ ಲೇಔಟ್​, ಕಮ್ಮನಹಳ್ಳಿ, ಬಗಲಕುಂಟೆ, ಕೋಣನಕುಂಟೆ, ಯಲಚೇನಹಳ್ಳಿ, ಬೇಗೂರು ಸೇರಿ ಇನ್ನಿತರ ಕಡೆಗಳಲ್ಲಿನ ಸಣ್ಣ ಕಟ್ಟಡಗಳಷ್ಟೇ ಅಲ್ಲದೆ, ದೊಡ್ಡ ದೊಡ್ಡ ಅಪಾರ್ಟ್​ಮೆಂಟ್​ಗಳ ಒಳಗೂ ನೀರು ನುಗ್ಗಿದೆ. ಅದರಲ್ಲೂ ಅಪಾಟ್​ಮೆಂಟ್​ಗಳ ಬೇಸ್​ಮೆಂಟ್​ಗೆ ನೀರು ನುಗ್ಗಿ, ವಾಹನಗಳೆಲ್ಲವೂ ಜಲಾವೃತವಾಗಿವೆ.

ಓಡಾಡಲೂ ಜಾಗವಿಲ್ಲ: ದತ್ತಾತ್ರೇಯ ಬಡಾವಣೆ, ಇಟ್ಟಮಡು, ಗುರುದತ್ತ ಲೇಔಟ್​, ಪ್ರಮೋದ್​ ಲೇಔಟ್​ಗಳು ಸಂರ್ಪೂಣ ಜಲಾವೃತವಾಗಿವೆ. ಇಲ್ಲೆಲ್ಲ ವಾಹನಗಳ ಸಂಚಾರವಿರಲಿ, ಜನರ ಓಡಾಟಕ್ಕೂ ಅವಕಾಶವಿಲ್ಲದಂತಾಗಿದೆ. ಅಲ್ಲದೆ, ದತ್ತಾತ್ರೇಯ ನಗರದಲ್ಲಿ ಜನರು ನೆಲಮಹಡಿಯಲ್ಲಿರಲಾಗದೆ ಮೊದಲ ಮಹಡಿಗೆ ಹೋಗಿ ರಕ್ಷಣೆ ಪಡೆಯುವಂತಾಗಿತ್ತು. ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ನೀರಿನಲ್ಲಿ ಸಿಲುಕಿದ್ದವರನ್ನು ರಸಿದರು. ಮಳೆಯಿಂದ ಗವಿ ಗಂಗಾಧರೇಶ್ವರ ದೇವಸ್ಥಾನ ಕಾಂಪೌಂಡ್​ಗೆ ಹಾನಿಗೊಳಗಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ತೇಲಿದ ಕಾರುಗಳು: ಮಳೆಯ ಪರಿಣಾಮ ರಸ್ತೆಯಲ್ಲಿ ನಿಲ್ಲಿಸಿದ್ದ, ಅಪಾರ್ಟ್​ಮೆಂಟ್​ಗಳ ಬೇಸ್​ಮೆಂಟ್​ನಲ್ಲಿ ನಿಲ್ಲಿಸಿದ್ದ ಕಾರುಗಳು ಬೋಟ್​ ಮಾದರಿಯಲ್ಲಿ ತೇಲಿದವು. ಅದರಲ್ಲೂ ಇಟ್ಟಮಡು ಪ್ರದೇಶದಲ್ಲಿ ಹತ್ತಾರು ಕಾರುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಮೇಲ್ಸೇತುವೆ, ಅಂಡರ್​ಪಾಸ್​ಗಳನ್ನೂ ಬಿಡಲಿಲ್ಲ: ಮಳೆಯ ಪರಿಣಾಮ ಬೆಂಗಳೂರಿನ ಬಹುತೇಕ ಅಂಡರ್​ಪಾಸ್​ಗಳು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿ, ನೀರು ನಿಂತಿತ್ತು. ಕಾವೇರಿ ಜಂಕ್ಷನ್​, ಓಕಳಿಪುರ ಕೆಳಸೇತುವೆಗಳಲ್ಲಿ ಭಾರಿ ಪರಮಾಣದ ನೀರು ನಿಂತಿತ್ತು. ಮೈಸೂರು ರಸ್ತೆ ಮೇಲ್ಸೇತುವೆಯಲ್ಲೂ ನೀರು ನಿಲ್ಲುವ ಮೂಲಕ, ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುವಂತಾಗಿತ್ತು. ಹಾಗೆಯೇ, ಮಲ್ಲೇಶ್ವರ ಬಿಬಿಎಂಪಿ ಕಚೇರಿ ಎದುರಿನ ರಸ್ತೆ ಸೇರಿ ಇನ್ನಿತರ ಕಡೆಗಳಲ್ಲೂ ನೀರು ನಿಂತಿತ್ತು.

ಎಲ್ಲೆಲ್ಲಿ, ಎಷ್ಟೆಷ್ಟು ಮಳೆ?:
ರಾಜರಾಜೇಶ್ವರಿನಗರ 10.4 ಸೆ.ಮೀ., ಕೆಂಗೇರಿ 10.3 ಸೆ.ಮೀ., ವಿದ್ಯಾಪಿಠ 9.5 ಸೆ.ಮೀ., ಉತ್ತರಹಳ್ಳಿ 8.7 ಸೆ.ಮೀ., ಕುಮಾರಸ್ವಾಮಿಲೇಔಟ್​ 8 ಸೆ.ಮೀ., ಬಸವನಗುಡಿ 8.1 ಸೆ.ಮೀ., ಜ್ಞಾನಭಾರತಿ 4.5 ಸೆ.ಮೀ., ಕೊಡಿಗೆಹಳ್ಳಿ 5.2 ಸೆ.ಮೀ., ಚಾಮರಾಜಪೇಟೆ 3.9 ಸೆ.ಮೀ., ನಾಗರಬಾವಿ 3.1 ಸೆ.ಮೀ., ಲಕ್ಕಸಂದ್ರ 5.4 ಸೆ.ಮೀ., ಬೊಮ್ಮನಹಳ್ಳಿ 5.3 ಸೆ.ಮೀ., ಕೋರಮಂಗಲ 4.2 ಸೆ.ಮೀ., ಸಾರಕ್ಕಿ 6.5 ಸೆ.ಮೀ., ಪಟ್ಟಾಭಿರಾಮನಗರ 6.1 ಸೆ.ಮೀ., ಕೋಣನಕುಂಟೆ 5.8 ಸೆ.ಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net