ನಾಳೆ 13 ಜಿಲ್ಲೆಗಳಲ್ಲಿ ಭಾರಿ ಮಳೆ: ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಬಿರುಸು

heavy rain
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೆ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ಮಳೆ 4 ದಿನ ಮುಂದುವರಿಯಲಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಇನ್ನಷ್ಟು ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ಬೆಂಗಳೂರು,ಬೆಂ.ಗ್ರಾಮಾಂತರ ದೊಡ್ಡಬಳ್ಳಾಪುರ, ಚಾಮರಾಜನಗರದ ಹರದನಹಳ್ಳಿ, ದಕ್ಷಿಣ ಕನ್ನಡದ ಮಂಗಳೂರು, ಕಲಬುರಗಿಯ ಆಳಂದ, ಹಾಸನ, ಕೊಡಗಿನ ಗೋಣಿಕೊಪ್ಪ, ಮೈಸೂರಿನ ಹುಣಸೂರು, ಚಿಕ್ಕಬಳ್ಳಾಪುರ,ಶಿವಮೊಗ್ಗದ ಆಗುಂಬೆ,ಯಾದಗಿರಿಯ ಭೀಮರಾಯನಗುಡಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಭಾರಿ ಮಳೆಯಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಅ.21ರಂದು ಅತಿ ಭಾರಿ ಮಳೆ ಸುರಿಯುವುದರಿಂದ ಹವಾಮಾನ ಇಲಾಖೆ ಆರೆಂಜ್​ ಅರ್ಲಟ್​ ನೀಡಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು, ಬೆಂ.ಗ್ರಾಮಾಂತರ, ದಾವಣಗೆರೆ, ಕೋಲಾರ, ತುಮಕೂರಿನಲ್ಲಿ ಅ.21ರಿಂದ ಅ.22ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಇಲಾಖೆ ಯೆಲ್ಲೋ ಅರ್ಲಟ್​ ಕೊಟ್ಟಿದೆ. ಹಾಸನ, ಕೊಡಗು, ರಾಮನಗರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅರ್ಲಟ್​ ಇರಲಿದೆ.ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಬೀದರ್​, ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿ, ಮಂಡ್ಯ, ಮೈಸೂರಿನಲ್ಲಿ ಮುಂದಿನ 48 ಗಂಟೆ ಗುಡುಗು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net