ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸನ್ನದ್ಧವಾಗಲು ಸಚಿವ ಎಚ್.ಕೆ. ಪಾಟೀಲ ಸೂಚನೆ

IMG-20240805-WA0003
Published on

ಗದಗ: ಜಿಲ್ಲೆಯ ನರಗುಂದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೇ ಪ್ರವಾಹವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವು ಸರ್ವ‌ ಸನ್ನದ್ಧವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ, ಲಕಮಾಪುರ, ವಾಸನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ‌ ನಂತರ ನರಗುಂದ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರವಾಹ ನಿರ್ವಹಣೆಯಲ್ಲಿ ತಾಲೂಕು ಆಡಳಿತವು ನಿರಂತರವಾಗಿ ಜಿಲ್ಲಾಡಳಿತ ದೊಂದಿಗೆ ಸಂಪರ್ಕದಲ್ಲಿದ್ದು ಪರಸ್ಥಿತಿ ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಇಲಾಖೆ ಅಧಿಕಾರಿಗಳ ನಿಷ್ಕಾಳಜಿ, ವಿಳಂಭ ದೋರಣೆ ಸಹಿಸಲಾಗದು ಎಂದು ಎಚ್ಚರಿಸಿದರು.

ಅತಿವೃಷ್ಠಿ ಆವರಿಸಿದಲ್ಲಿ ಗ್ರಾಮಗಳಲ್ಲಿ ಅಧಿಕಾರಿಗಳು ಹಾಜರಿದ್ದು ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ, ಎತ್ತರದ ಸ್ಥಳಗಳಿಗೆ ತೆರಳಲು ಸೂಚನೆ ನೀಡಬೇಕು. ತಗ್ಗು ಪ್ರದೇಶಗಳಲ್ಲಿ ಜನ ಜಾನುವಾರು ವಾಸಿಸದಂತೆ ನೋಡೊಕೊಳ್ಳಬೇಕು. ಮಲಪ್ರಭಾ ನದಿಯ ನವೀಲುತೀರ್ಥ ಡ್ಯಾಂದಿಂದ ಹೆಚ್ಚುವರಿ ನೀರು ಬಿಡುವ ಮಾಹಿತಿ ದೊರೆತ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ಯಾವುದೇ ಕಾರಣಕ್ಕೂ ಜನ ಜಾನುವಾರು ಜೀವಹಾನಿಗೆ ಅವಕಾಶ ಬೇಡ. ಆದ್ಯತೆ ಮೇರೆಗೆ ಕೆಲಸ ಮಾಡುವ ಮೂಲಕ ಸಾರ್ವಜನಿಕರ ಆಸ್ತಿ ಸಂರಕ್ಷಣೆ ಕಡೇಗೂ ಗಮನ ಹರಿಸುವಂತೆ ಸೂಚಿಸಿದರು.

ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಗುರುತಿಸಿರುವ ಕಾಳಜಿ ಕೇಂದ್ರ ಗಳಲ್ಲಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ನಿಯೋಜಿತ ಅಧಿಕಾರಿಗಳು ಪರಿಶೀಲಿಸಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ತಿಳಿಸಿದ ಅವರು, ಕಾಳಜಿ ಕೇಂದ್ರದಲ್ಲಿ ಆರೋಗ್ಯ ಅಧಿಕಾರಿಗಳು ಹಾಜರಿದ್ದು ಕಾಳಜಿ ಕೇಂದ್ರಕ್ಕೆ ಆಗಮಿಸುವ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಪ್ರಮಾಣದ ಔಷದಿಗಳನ್ನು ನೀಡಬೇಕು ಎಂದು ತಿಳಿಸಿದರು.

ಪ್ರವಾಹದ ಮುನ್ಸುಚನೆ ಮಾಹಿತಿ ದೊರೆತ ತಕ್ಷಣವೇ ಅಗ್ನಿಶಾಮಕ ತಂಡವು ವೇಗವಾಗಿ ಸ್ಥಳಕ್ಕೆ ತೆರಳಿ ರಕ್ಷಣೆಯಲ್ಲಿ ತೊಡಗಬೇಕು. ಸ್ಥಳಿಯ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯದಿಂದ ನಿಭಾಯಿಸಲು ನಿರ್ದೇಶಿಸಿದರು.

ಕೊಣ್ಣೂರಿನ ನದಿಯ ಭಾಗದಲ್ಲಿ ೪-೫ ಕಿ.ಮೀ ನದಿಯ ಅಗಲೀಕರಣ, ಹುಳೆತ್ತುವ ಕುರಿತು ಸೆಪ್ಟೆಂಬರ್ ೧ ರೊಳಗೆ ಯೋಜನಾ ವರದಿ ಸಿದ್ಧ ಪಡಿಸಿ ಸಲ್ಲಿಸಲು ನೀರಾವರಿ ಇಲಾಖೆಯ ಅಧಿಕಾರಿ ಕಾಂಬಳೆ ಬಾಬು ಅವರಿಗೆ ಸೂಚನೆ ನೀಡಿದರು. ಅಲ್ಲದೇ ಬೆಳ್ಳೇರಿ ಬ್ರೀಡ್ಜ್ ನಲ್ಲಿನ ಗಿಡ ಕಂಟಿಗಳನ್ನು ತೆರವು ಮಾಡುವ ಮೂಲಕ ನದಿನೀರು ಸರಾಗವಾಗಿ ಮುಂದೆ ಸಾಗುವಂತೆ ಕ್ರಮ ವಹಿಸಲು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ನರಗುಂದ ತಾಲೂಕಿನ ೮ ಹಾಗೂ ರೋಣ ತಾಲೂಕಿನ ೮ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಂಭವನೀಯ ಗ್ರಾಮಗಳು ಎಂದು ಗುರುತಿಸಲಾಗಿದೆ. ಈ ಎಲ್ಲ ಗ್ರಾಮಗಳಲ್ಲಿನ ಅಧಿಕಾರಿಗಳಿಗೆ ಪ್ರವಾಹ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ತಿಳಿಸಿದ್ದು, ಯಾವುದೇ ಅನಾಹುತಕ್ಕೆ ಅವಕಾಶ ನೀಡದಂತೆ ಸೂಕ್ತ ಮುಂಜಾಗ್ರತೆ ವಹಿಸಲು ತಿಳಿಸಲಾಗಿದೆ ಎಂದರು.

ಲಕಮಾಪುರ ಗ್ರಾಮದ ೪ ಕುಟುಂಬಕ್ಕೆ ತಲಾ ೫ ಸಾವಿರದಂತೆ ಪರಿಹಾರ ನೀಡಲಾಗುತ್ತಿದೆ. ಅದೇ ತರಹ ವಿಠಲಾಪುರದ ೧೪ ಕುಟುಂಬಗಳ ೪೦ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆ ಕುಟುಂಬಗಳಿಗೂ ಸಹ ತಲಾ ಐದು ಸಾವಿರ ಪರಿಹಾರ ನೀಡಲಾಗುತ್ತಿದೆ. ಪ್ರತಿ ಕಾಳಜಿ ಕೇಂದ್ರಕ್ಕೂ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ನರಗುಂದ ತಾಲ್ಲೂಕಿನಲ್ಲಿ ಮೂರು ಮನೆಗಳು ಹಾನಿಗೀಡಾಗಿವೆ ಅವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗಳ ಖಾತೆಯಲ್ಲಿ ೯.೫೦ ಕೋಟಿ ಹಾಗೂ ನರಗುಂದ ತಹಶಿಲ್ದಾರರ ಖಾತೆಯಲ್ಲಿ ೬೧.೫೪ ಲಕ್ಷ ಎಸ್.ಡಿ.ಆರ್.ಎಪ್ ಅನುದಾನವು ಮೀಸಲಿದೆ. ಉಳಿದಂತೆ ಎಲ್ಲ ತಹಶಿಲ್ದಾರರ ಖಾತೆಗಳಲ್ಲಿಯೂ ಅನುದಾನ ಇದ್ದು, ಪ್ರವಾಹ ನಿರ್ವಹಣೆಗೆ ಬಳಕೆ ಮಾಡಲಾಗುವು ಎಂದರು.

ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷರಾದ ರಾಜುಗೌಡ, ಸಿದ್ದು ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್,  ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸೇರಿದಂತೆ ತಹಶಿಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net