

ಬೆಳಗಾವಿ : ತುಂತುರು ಹನಿಗಳಾಗಿ ಸುರಿದ ಪುನರ್ವಸು ಮಳೆ ಬಳಿಕ, ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಪುಷ್ಯ ಮಳೆ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೂನ್.ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದಿದ್ದರಿಂದ ಭರದ ಛಾಯೆಯಲ್ಲಿಮುಳುಗಿ ಕಂಗಾಲಾಗಿದ್ದ ರೈತ ಸಮುದಾಯ ಇದೀಗ ಕೊಂಚ ನಿರಾಳರಾದಂತಿದೆ. ಪುಷ್ಯ ಮಳೆ ಬಿರುಸು ಪಡೆದಿರುವುದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಜೂನ್ ಅಂತ್ಯದವರೆಗೂ ಮಳೆ ಸುಳಿಯದಿದ್ದರಿಂದಾಗಿ ಹಾಗೂ ಬಿಸಿಲಿನ ತಾಪದಿಂದಾಗಿ ನದಿ, ಹಳ್ಳ, ಕೊಳ್ಳ, ಕೆರೆಕಟ್ಟೆಗಳಲ್ಲಿನ ನೀರು ಬೇಗನೆ ಬತ್ತಿ ಹೋಗಿತ್ತು. ಅಂತರ್ಜಲದ ಮಟ್ಟವೂ ಕುಸಿದಿದ್ದರಿಂದ ಕೊಳವೆ ಬಾವಿಗಳು ಬರಿದಾಗಿತ್ತು. ಆಗಾಗ ತುಂತುರು ಮಳೆಯಾದರೂ ಬಿತ್ತನೆಗೆ ಭೂಮಿ ಹದಗೊಂಡಿರಲಿಲ್ಲ. ಜು.20ರಿಂದ ನಿರಂತರವಾಗಿ ಸುರಿಯುವ ಮೂಲಕ ವರುಣ ಕೊನೆಗೂ ಕೃಪೆ ತೋರಿದಂತಿದ್ದು, ಭಾನುವಾರವೂ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದೆ.
ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಜಲಮೂಲಗಳಿಗೆ ಜೀವಕಳೆ ಬಂದಿದ್ದು, ಜಿಲ್ಲೆಯ ಸಪ್ತ ನದಿಗಳು ನದಿಗಳೂ ಮೈದುಂಬಿವೆ. ಖಾನಾಪುರ ಹಾಗೂ ಬೆಳಗಾವಿ ತಾಲೂಕಿನ ಕೆಲವು ಭಾಗಗಳಲ್ಲಿ ಭತ್ತ ನಾಟಿ ಕೆಲಸವೂ ಚುರುಕುಗೊಂಡಿದೆ. ರೈತರು ಸಸಿ ಮಡಿಗಳನ್ನು ಸಿದ್ಧಪಡಿಸಿ ಮೊಳಕೆ ಕಟ್ಟಿದ ಭತ್ತವನ್ನು ಮಡಿಗಳಲ್ಲಿ ಹಾಕಿದ್ದಾರೆ. 20 ದಿನಗಳಲ್ಲಿ ಸಸಿಗಳು ದೊಡ್ಡದಾಗಲಿದ್ದು, ನಾಟಿ ಮಾಡಲು ಸಿದ್ದತೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಜು.20ರ ವರೆಗೂ ಮಳೆ ಕೊರತೆಯಿಂದಾಗಿ ಬಿತ್ತನೆಗೆ ಭೂಮಿ ಹದಗೊಂಡಿರದ ಕಾರಣ ಬಹುತೇಕರು ಬಿತ್ತನೆಯಿಂದ ಹಿಂದೆ ಸರಿದಿದ್ದರು. ಆದರೆ, ಇದೀಗ ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಭೂಮಿ ತೇವಗೊಂಡಿದೆ. ಆದರೆ, ಬಿತ್ತನೆಗೆ ಹದಗೊಳ್ಳಬೇಕಾದರೇ, ಮಳೆ ಬಿಡುವು ಕೊಟ್ಟರೂ ಎರಡು ದಿನ ಕಾಯಬೇಕಿದೆ. ಹೀಗಾಗಿ ಜಿಲ್ಲೆಯ ಇನ್ನಿತರ ತಾಲೂಕುಗಳಲ್ಲಿ ‘ಪುಷ್ಯದಲ್ಲಿ ನೆಟ್ಟ ಗಿಡ ಪುಟಗೋಸಿ ಆದೀತು’ ಎಂಬ ಗಾಧೆಯಂತೆಯೇ ಹೆಚ್ಚಿನ ರೈತರು ಲಾಭದ ಫಸಲಿನ ಬದಲಿಗೆ ಜಾನುವಾರುಗಳಿಗೆ ಮೇವು ಬೇಳೆಯುವ ಬೆಳೆಗಳ ಮೋರೆ ಹೋಗುತ್ತಿದ್ದಾರೆ.
ಇನ್ನು ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಕೆಳಹಂತದ 15 ಸೇತುವೆಗಳು ಮುಳುಗಡೆಯಾಗಿದ್ದು, ಜಿಲ್ಲೆಯ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿವೆ, ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೇ, ಮುನ್ನೆಚ್ಚರಿಕೆಯಿಂದಾಗಿ ಗೋಕಾಕ್ ಫಾಲ್ಸ್ ವೀಕ್ಷಣೆಗೆ ನಿರ್ಬಂಧವಿಧಿಸಲಾಗಿದೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಹಳೆಯ ಮನೆ ಗೋಡೆಗಳು ಕುಸಿದು ಬೀಳುತ್ತಿದ್ದು, ಖಾನಾಪುರ ತಾಲೂಕಿನ ಭೂರುಣಕಿ ಗ್ರಾಮದಲ್ಲಿ ಗೋಪಾಲ ತಾರೋಡ್ಕರ್ ಹಾಗೂ ಗೌಸ್‌ಅಹ್ಮದ್ ಹೆರೇಕರ್ ಅವರ ಮನೆಗಳು ಕುಸಿದು ಬಿದ್ದಿವೆ. ಬೆಳಗಾವಿ ತಾಲೂಕಿನಲ್ಲೂ ಮಳೆ ಆರ್ಭಟಿಸುತ್ತಿದ್ದರಿಂದ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ನೂರಾರು ಹೆಕ್ಟೇರ್ ಪ್ರದೇಶ ಜಲಾವೃತಗೊಂಡಿದೆ. ಭಾನುವಾರ ಮತ್ತೊಂದು ದೇವಾಲಯಕ್ಕೆ ನೀರು ನುಗ್ಗಿದ್ದು, ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನ ದೂದಗಂಗಾ ನದಿ ನೀರು ಧಿಗ್ಬಂದನ ಹಾಕಿದೆ.