ರೈತರಲ್ಲಿ ಹರ್ಷ ತಂದ ವರ್ಷಧಾರೆ;ಜಿಲ್ಲಾದ್ಯಂತ ಮುಂದುವರಿದ ವರುಣಾರ್ಭಟ, 83 ಸೇತುವೆ ಮುಳುಗಡೆ ಭೀತಿ

IMG-20230720-WA0110.jpg
Published on

ಬೆಳಗಾವಿ : ಹಲವು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿದ್ದ ಮಳೆ, ಕಳೆದೆರಡು ದಿನಗಳಿಂದ ನಿರಂತರವಾಗಿ ಅಬ್ಬರಿಸುತ್ತಿರುವುದರಿಂದ ಜಿಲ್ಲೆಯಲ್ಲಿನ ಸಪ್ತ ನದಿಗಳಿಗೆ ಜೀವ ಕಳೆ ಬಂದಿದೆ.

ನದಿಗಳ ಒಳ ಹರಿವೂ ಗಣನೀಯವಾಗಿ ಹೆಚ್ಚಾಗಿದ್ದರಿಂದ ಚಿಕ್ಕೋಡಿ, ಖಾನಾಪುರ, ಅಥಣಿ, ಕಾಗವಾಡ ತಾಲೂಕಿನ ಹತ್ತಾರು ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ನಿರ್ಬಂಧಿಸಿದ್ದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕಾಗವಾಡದ ರಾಜಾಪುರ-ಮಂಗವಾಟಿ ಸೇತುವೆ, ಗೋಕಾಕ್ ತಾಲೂಕಿನ ಗೋಕಾಕ್-ಸಿಂಗಲಾಪುರ ಸೇತುವೆ, ಜತ್ರಾಟ-ಭಿವಶಿ ಗ್ರಾಮಗಳ ನಡುವಿನ ಸೇತವೆ ಜಲಾವೃತವಾಗಿವೆ.

ಜಿಲ್ಲೆಯಲ್ಲಿನ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಹಾಗೂ ವೇದಗಂಗಾ ನದಿ ತಟದ ಸೇತುವೆಗಳು ಸೇರಿದಂತೆ ಜಿಲ್ಲಾದ್ಯಂತ ಒಟ್ಟು 83 ಸೇತುವೆಗಳು ಮುಳುಗಡೆಯಾಗುವ ಹಂತದಲ್ಲಿದ್ದು, ಜಿಲ್ಲಾ ಪೊಲೀಸರು ಸಂಚಾರ ನಿರ್ಬಂಧಿಸಿದ್ದಲ್ಲದೇ, ಮುನ್ನೆಚ್ಚರಿಕೆಯಿಂದ ಸ್ಥಳದಲ್ಲಿ ನಿಯೋಜಿಸಿ ವಿಶೇಷ ನಿಗಾ ಇರಿಸಿದ್ದಾರೆ.

ಇನ್ನು ದಿನವೀಡಿ ಎಡೆಬಿಡದೆ ಮಳೆ ಬಿದ್ದ ಪರಿಣಾಮ ಜಿಲ್ಲೆಯ ಸೀಮಿತ ಪ್ರದೇಶದಲ್ಲಿ ಮುಂಚಿತವಾಗಿ ಬಿತ್ತನೆಯಾದ ಹೆಸರು, ಸೋಯಾ ಹಾಗೂ ತೋಟಗಾರಿಕೆ ಬೆಳೆಗಳು ಸೇರಿದಂತೆ ಜಿಲ್ಲೆಯ ಅಸ್ಮಿತೆಯಾದ ಕಬ್ಬು ಬೆಳೆಯೂ ಮತ್ತಷ್ಟು ಹಸಿರೊಡೆಯುತ್ತಿದೆ. ಮುಂಗಾರು ವಿಳಂಬದಿಂದಾಗಿ ಕಬ್ಬು ಸೇರಿದಂತೆ ಇತರ ಬೆಳೆಗಳು ಒಣಗುತ್ತಿದ್ದವು. ಇದರಿಂದಾಗಿ ಇಂತಹ ಧಾರಾಕಾರ ಮಳೆಗಾಗಿ ಗಡಿ ಜಿಲ್ಲೆಯ ರೈತಾಪಿ ವರ್ಗ ತಿಂಗಳುಗಳಿಂದ ಎದುರು ನೋಡುತ್ತಿತ್ತು. ಜೋರು ಮಳೆಗಿಂತ ತುಂತುರು ಮಳೆಯ ಹನಿಗಳನ್ನು ಬಿತ್ತನೆಗಾಗಿ ಸಿದ್ಧವಾದ ಜಮೀನಿನ ಮಣ್ಣು ಆಳಕ್ಕೆ ಹಿರಿಕೊಳ್ಳುತ್ತದೆ ಮತ್ತು ಮೊಳಕೆಯೊಡೆದ ಬೆಳೆಗಳೂ ಹಿಡಿದಿಟ್ಟುಕೊಳ್ಳುತ್ತವೆ. ಮುಂಗಾರು ಶುರುವಾಗಿ ತಿಂಗಳುಗಳು ಕಳೆದರೂ ದನದ ಬಾಯಿಗೆ ಹಸಿರು ಹುಲ್ಲು ಸಿಗಲಿಲ್ಲ. ಸೋನೆ ಮಳೆಯು ಜಾನುವಾರುಗಳಿಗೆ ಮೇವು ಚಿಗುರಿಸುವ ಭರವಸೆ ಮೂಡಿಸಿದೆ. ಮೇವಿನ ಅಭಾವ ಎದುರಿಸುತ್ತಿದ್ದ ರೈತರ ಆತಂಕವೂ ದೂರ ಮಾಡಿದೆ.

ನಿರಂತರ ಮಳೆ ಹಾಗೂ ಗಾಳಿಯಿಂದಾಗಿ ಅಲ್ಲಲ್ಲಿ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net