ಕರಾವಳಿಯಾದ್ಯಂತ ದಿನವಿಡೀ ಬಿರುಸಿನ ಮಳೆ

Rain
Published on

ಮಂಗಳೂರು/ಉಡುಪಿ: ಬಂಗಾಳ ಕೊಲ್ಲಿಯ ಆಂಧ್ರ ಕರಾವಳಿ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ದ.ಕ, ಉಡುಪಿ ಜಿಲ್ಲೆಗಳಾದ್ಯಂತ ಮಂಗಳವಾರ ಬೆಳಗ್ಗಿನಿಂದ ನಿರಂತರ ಮಳೆ ಸುರಿದಿದೆ.

ಘಟ್ಟ ತಪ್ಪಲು ಪ್ರದೇಶ, ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಮಳೆಯಾದರೆ, ನಗರ ಪ್ರದೇಶಗಳಲ್ಲಿ ನಿರಂತರ ಸಾಧಾರಣದಿಂದ ಉತ್ತಮವಾಗಿ ಸುರಿದಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಗಾಳಿಗೆ ಮರ, ಕೊಂಬೆಗಳು ಮುರಿದುಬಿದ್ದು ದಿನವಿಡೀ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪುತ್ತೂರಿನಲ್ಲಿ ಮನೆಯೊಂದಕ್ಕೆ ಭಾಗಶಃ ಹಾನಿಯಾಗಿದೆ. ಉಡುಪಿ ನಗರದ ಹಲವೆಡೆ ಗಾಳಿಮಳೆ ಪರಿಣಾಮ ಕೆಲಕಾಲ ವಿದ್ಯುತ್ ವ್ಯತ್ಯಯವಾಗಿತ್ತು.

ನದಿಪಾತ್ರದ ಮೂಲ್ಕಿ, ತಾಳಿಪಾಡಿ, ಕಲ್ಲಮುಂಡ್ಕೂರು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ನಿಂತು ಬಳಿಕ ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಗುರುಪ್ರಸಾದ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಬಂಟ್ವಾಳ ಸೇರಿದಂತೆ ಇತರೆಡೆಗಳಲ್ಲೂ ಗದ್ದೆಗಳಲ್ಲಿ ನೀರು ನಿಂತು ಕಟಾವಿಗೆ ಸಿದ್ಧವಾಗಿರುವ ಭತ್ತದ ಪೈರಿಗೆ ಮಳೆಯಿಂದ ಹಾನಿಯಾಗಿದೆ.

ಬೆಳಂದೂರಿನಲ್ಲಿ ಅತ್ಯಧಿಕ ಮಳೆ: ಮಂಗಳವಾರ ಬೆಳಗ್ಗಿನಿಂದ ಸಾಯಂಕಾಲದ ವರೆಗಿನ ಮಳೆ ಮಾಹಿತಿಯಂತೆ ಪುತ್ತೂರಿನ ಬೆಳಂದೂರಿನಲ್ಲಿ ಅತ್ಯಧಿಕ 82.5 ಮಿ.ಮೀ. ಮಳೆ ಸುರಿದಿದೆ. ಕಾಣಿಯೂರು 78, ಸುಳ್ಯದ ಉಬರಡ್ಕ ಮಿತ್ತಡ್ಕದಲ್ಲಿ 68 ಮಿ.ಮೀ. ಮಳೆಯಾಗಿದೆ. ಕಾರ್ಕಳದ ಅಜೆಕಾರು, ಕೆರ್ವಾಶೆ, ಬೈಂದೂರಿನ ಶಿರೂರು, ಹೆಬ್ರಿ ತಾಲೂಕಿನ ಚಾರ, ಹೆಬ್ರಿ, ಕಬ್ಬಿನಾಲೆ, ಮುದ್ರಾಡಿ ಮೊದಲಾದ ಗ್ರಾಮಗಳಲ್ಲಿ 115 ಮಿ.ಮೀ.ಗೂ ಅಧಿಕ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೊಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಮಂಗಳವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 16.4, ಬೆಳ್ತಂಗಡಿ 28.2, ಮಂಗಳೂರು 19.5, ಪುತ್ತೂರು 21.1, ಸುಳ್ಯ 27.5 ಮಿ.ಮೀ. ಸಹಿತ ದ.ಕ ಜಿಲ್ಲೆಯಲ್ಲಿ ಸರಾಸರಿ 22 ಮಿ.ಮೀ. ಮಳೆಯಾಗಿದೆ.

ಆರೆಂಜ್ ಅಲರ್ಟ್: ಬುಧವಾರವೂ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಅಲ್ಲಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯುವ ಸಾಧ್ಯತೆಯಿದೆ. ಕರ್ನಾಟಕ ಕರಾವಳಿಗೆ ಸಂಬಂಧಿಸಿದಂತೆ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರರು ಸಮುದ್ರಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಂಗಳವಾರ ಸಮುದ್ರ ತೀರದಲ್ಲಿ ಗಾಳಿ ಮತ್ತು ಅಲೆಗಳ ಅಬ್ಬರ ಹೆಚ್ಚಿದ್ದು, ಬೃಹತ್ ಗಾತ್ರದಲ್ಲಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net