ಚಾರ್ಮಾಟಿ ಘಾಟ್‌ನಲ್ಲಿ ಭಾರಿ ಮಳೆ

md rain
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಯಿಂದ ಜಲಾವೃತವಾಗಿರುವುದು.
Published on

ಮೂಡಿಗೆರೆ: ಚಾರ್ಮಾಡಿ ಘಾಟ್‌ನಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆಗೆ ರಸ್ತೆಯಲ್ಲಿ 2 ಅಡಿ ನೀರು ಹರಿದಿದ್ದು, ಪ್ರಯಾಣಿಕರು ಮಳೆ ಅಬ್ಬರ ಕಂಡು ಜೀವಭಯದಿಂದ ವಾಹನದೊಳಗೆ ಚೀರಾಡಿದರು.

ಮಂಗಳವಾರ ಸಂಜೆ 4.30 ರಿಂದ 6ರವರೆಗೆ ಭಾರಿ ಪ್ರಮಾಣದ ಮಳೆಯಾಗಿದೆ. ರಸ್ತೆ ಸಂಪೂರ್ಣ ಜಲಾವೃತವಾಗಿದ್ದರಿಂದ ವಾಹನದ ಚಕ್ರಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದವು. ಗುಡ್ಡದ ಮೇಲಿಂದ ಮಣ್ಣು ಮಿಶ್ರಿತ ನೀರಿನೊಂದಿಗೆ ಬಂಡೆಕಲ್ಲುಗಳು ನೇರವಾಗಿ ಹೆದ್ದಾರಿಗೆ ಬೀಳುತ್ತಿದ್ದರಿಂದ ಹತ್ತಾರು ವಾಹನಗಳನ್ನು ಬದಿಗೆ ನಿಲ್ಲಿಸಲಾಯಿತು. ನಿಂತಿದ್ದ ವಾಹನದ ಮೇಲೆ ಗುಡ್ಡ ಕುಸಿಯುವ ಭೀತಿಯಿಂದ ಜಲಾವೃತವಾದ ರಸ್ತೆಯಲ್ಲಿ ಜೀವ ಭಯದಿಂದಲೇ ಸಾಗಬೇಕಾಯಿತು. ಎರಡು ಕಡೆ ಗುಡ್ಡ ಕುಸಿದಿದ್ದು, ಅದೇ ಸ್ಥಳದಲ್ಲಿ ಚಲಿಸುತ್ತಿದ್ದ ಬೋಲೇರೋ ವಾಹನವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ.
2019 ಜೂ.29ರಂದು ಸುರಿದ ಧಾರಾಕಾರ ಮಳೆಯಿಂದ ಘಾಟ್ ರಸ್ತೆಯಲ್ಲಿ 19 ಕಡೆ ಗುಡ್ಡ ಕುಸಿದು 24 ಗಂಟೆ ವಾಹನಗಳು ಘಾಟಿಯ 22 ಕಿ.ಮೀ. ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಅದೇ ರೀತಿಯ ಮಳೆ ಮಂಗಳವಾರವೂ ಆಗಿದೆ. ಚಾರ್ಮಾಡಿ ಮತ್ತು ಕೊಟ್ಟಿಗೆಹಾರದಲ್ಲಿರುವ ಅರಣ್ಯ ಮತ್ತು ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ತಡೆಹಿಡಿಯಲಾಗಿತ್ತು. ಘಾಟ್ ರಸ್ತೆ ಮಧ್ಯದಲ್ಲಿರುವ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಭಾರಿ ಪ್ರಮಾಣದಲ್ಲಿ ನೀರು ರಸ್ತೆಗೆ ಧುಮುಕುತ್ತಿತ್ತು. ಘಾಟ್ ರಸ್ತೆ ಮುಗಿದು ಕೊಟ್ಟಿಗೆಹಾರ ಮತ್ತು ಬಣಕಲ್‌ವರೆಗೆ ಸಾಧಾರಣ ಮಳೆಯಾಗಿದೆ. ಅಲ್ಲಲ್ಲಿ ಗುಡ್ಡ ಕುಸಿದು ಚರಂಡಿಗಳೆಲ್ಲ ಮುಚ್ಚಿಹೋಗಿವೆ. ನಿರಂತರವಾಗಿ ಘಾಟ್ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ರಸ್ತೆಗಳು ಜಲಾವೃತವಾಗುತ್ತವೆ. ವಾಹನಗಳು ಸಾಗಲು ತೊಂದರೆಯಾಗುತ್ತದೆ. ಜೀವಭಯದಿಂದ ವಾಹನಗಳು ಸಂಚಾರ ಮಾಡಬೇಕಾಗುತ್ತದೆ. ಚಿಕ್ಕಮಗಳೂರು ಮತ್ತು ಮಂಗಳೂರು ಜಿಲ್ಲಾಡಳಿತ ಮತ್ತೆ ಚರಂಡಿಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net