

ಬಾಳೆಹೊನ್ನೂರು: ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರವಾಗಿ ಗುಡುಗು ಸಹಿತ ಮಳೆಯಾಗಿದೆ. ಮಧ್ಯಾಹ್ನವು ಸಹ ಸಂಜೆ ವೇಳೆಗೆ ಆರಂಭಗೊಂಡ ಮಳೆ ಮೂರು ಗಂಟೆಗಳ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಸಂಜೆಯೂ 4.30ರ ವೇಳೆಗೆ ಧಾರಾಕಾರವಾಗಿ ಗುಡುಗು ಸಹಿತ ಮಳೆ ಆರಂಭಗೊಂಡಿದ್ದು, ಹಲವು ಪ್ರದೇಶಗಳಲ್ಲಿ ಎಡೆಬಿಡದೆ ಸುರಿದಿದೆ.
ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ನೀರು ಹಳ್ಳದೋಪಾದಿಯಲ್ಲಿ ಹರಿದಿದ್ದು, ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕಾಯಿತು. ಕೆಲವು ಭಾಗಗಳಲ್ಲಿ ಮುಖ್ಯರಸ್ತೆಗೆ ಕಲ್ಲು, ಮಣ್ಣಿನ ರಾಶಿ ತೊಳೆದುಕೊಂಡು ಬಂದು ನಿಂತಿತ್ತು.
ಹಲವು ಕಡೆಗಳಲ್ಲಿ ಹಳ್ಳದ ನೀರು ನಾಟಿ ಮಾಡಿದ ಭತ್ತದ ಗದ್ದೆ, ಅಡಕೆ ತೋಟಗಳಿಗೆ ಸಹ ನುಗ್ಗಿತ್ತು. ಮಹಲ್ಗೋಡು ಬಳಿ ಮುಖ್ಯ ರಸ್ತೆಯ ಕಿರು ಸೇತುವೆಯ ಮೇಲೆ ಸೋಮವಾರ ಸಂಜೆ ನೀರು ಹರಿದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮಂಗಳವಾರ ಸಂಜೆ ಸುರಿದ ಮಳೆಯ ನೀರು ಸಹ ಮಹಲ್ಗೋಡು ಸೇತುವೆ ಮೇಲ್ಭಾಗಕ್ಕೆ ಬಂದಿತ್ತು.