

ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ದೀಪಾವಳಿ ಕಳೆದರೂ ಮಳೆ ಕಡಿಮೆಯಾಗದಿರುವುದುರಿಂದ ಭತ್ತದ ಕಟಾವು ಸರಿಯಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟಾವಿಗೆಂದು ಬಂದಿದ್ದ ಯಂತ್ರಗಳು ಕರಾವಳಿ ಭಾಗಗಳಿಂದ ವಾಪಸ್ ಊರುಗಳಿಗೆ ಹಿಂದಿರುಗಿದ್ದು, ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಬಹುತೇಕ ಕಡೆ ಕಟಾವಿಗೆ ಸಿದ್ಧವಾಗಿದ್ದ ಪೈರು ಭಾರಿ ಮಳೆಯಿಂದ ಭೂಮಿ ಪಾಲಾಗಿದೆ. ಬಯಲು ಪ್ರದೇಶದ ಗದ್ದೆಗಳಲ್ಲಿ ನೀರಿನ ಮಟ್ಟ ಇನ್ನೂ ಇಳಿದಿಲ್ಲದಿರುವುದರಿಂದ ಕಟಾವಿಗೆ ಸಮಸ್ಯೆಯಾಗಿದೆ. ರೈತರಂತೂ ಕಟಾವಿಗಾಗಿ ಹತ್ತು ದಿನಗಳು ಕಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣದಿಂದ ಹಲವೆಡೆ ಲಂಗರು ಹಾಕಿದ್ದ ಕಟಾವು ಯಂತ್ರಗಳು ನಷ್ಟಕ್ಕೊಳಗಾಗಿ ಮರಳಿ ತಮ್ಮ ಊರಿಗೆ ಹಿಂದಿರುಗಿವೆ. ಇನ್ನು ಹಲವೆಡೆ ನಾಟಿ ಕಾರ್ಯ ತಡವಾಗಿರುವ ಕಾರಣದಿಂದ ಪೈರುಗಳು ಬೆಳೆದಿಲ್ಲ. ಈ ಕಾರಣದಿಂದ ಹೆಚ್ಚುವರಿ ಒಂದು ವಾರ ಕಾಯಬೇಕಿದ್ದು, ಅಲ್ಲಿಯ ತನಕ ಯಂತ್ರಗಳು ಕಾಯಬೇಕಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಭತ್ತ ನಾಟಿಯಲ್ಲಿ ಈ ಬಾರಿಯೇ ರೈತರು ಅತಿ ಹೆಚ್ಚು ನಷ್ಟಕ್ಕೊಳಗಾಗಿದ್ದಾರೆ. ಹಲವೆಡೆ ಫಸಲು ಸಂಪೂರ್ಣ ಭೂಮಿ ಪಾಲಾಗಿದ್ದು, ರೈತಾಪಿ ವರ್ಗಕ್ಕೆ ನಿರಾಸೆ ಉಂಟುಮಾಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗೆ ಕಡಿಮೆ ದರದಲ್ಲಿ ಕಟಾವು ಯಂತ್ರ ಒದಗಿಸಲಾಗುತ್ತಿದ್ದು, ಎಲ್ಲೆಡೆ ಬೇಡಿಕೆ ಪೂರೈಸಲು ಕಷ್ಟವಾಗುತ್ತಿದೆ. ಕೃಷಿ ಅಧಿಕಾರಿ ಉಮೇಶ್ ನೇತೃತ್ವದಲ್ಲಿ ಕಟಾವು ಕಾರ್ಯಾಚರಣೆ ನಡೆಯುತ್ತಿದೆ.
ಕಟಾವು ಯಂತ್ರಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಸುಲಿಗೆಯ ಹಾವಳಿ ಹೆಚ್ಚಾಗಲು ಆರಂಭಿಸಿದೆ. ಸಿಕ್ಕ ಅಲ್ಪಸ್ವಲ್ಪ ಬೆಳೆಗಳ ಲಾಭ ಸಾರಿಗೆ ವೆಚ್ಚಕ್ಕೆ ವಿನಿಯೋಗವಾಗಿ ರೈತರ ಕೈ ಬರಿದಾಗುತ್ತಿದೆ. ಜತೆಗೆ ಬೇಡಿಕೆ ಹೆಚ್ಚಾದಂತೆ ದರಗಳೂ ಹೆಚ್ಚಾಗುತ್ತಿವೆ ಎಂದು ರೈತರು ದೂರಿದ್ದಾರೆ.
ಕಟಾವು ಯಂತ್ರಗಳ ಲಭ್ಯತೆ ಕಡಿಮೆಯಾಗಿದೆ. ದೀಪಾವಳಿಯ ತನಕ ಕೆಲವು ಕಡೆ ಯಂತ್ರಗಳು ಲಂಗಾರು ಹಾಕಿದ್ದವು. ಘಟ್ಟಪ್ರದೇಶದಲ್ಲಿ ಕಟಾವು ಕಾರ್ಯಗಳು ಆರಂಭವಾದ ಹಿನ್ನೆಲೆಯಲ್ಲಿ ಕರಾವಳಿಗೆ ಬಂದಿದ್ದ ಬಹುತೇಕ ಕಟಾವು ಯಂತ್ರಗಳು ನಿರ್ಗಮಿಸಿವೆ. ಯೋಜನೆಯ ಯಂತ್ರಕ್ಕೆ ಭಾರಿ ಬೇಡಿಕೆ ಇದ್ದು, ಪೂರೈಸಲು ಸಾಧ್ಯವಾಗುತ್ತಿಲ್ಲ. -ಉಮೇಶ್ ಹೆಬ್ರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಕೆಲವು ದಿನಗಳಿಂದ ಯಂತ್ರ ಸಿಗದೆ ಪರದಾಡುತ್ತಿದ್ದೇವೆ. ಹವಮಾನ ವೈಪರಿತ್ಯದಿಂದ ಭಾರಿ ನಷ್ಟ ಅನುಭವಿಸಿದ್ದೇವೆ. ನಾವು ಮಾಡಿದ ಹಡಿಲು ಭೂಮಿ ಕೃಷಿಯು ಸಂಪೂರ್ಣವಾಗಿ ನಾಶವಾಗಿದೆ. ಒಟ್ಟಿನಲ್ಲಿ ಕೃಷಿಯಿಂದ ಭಾರಿ ನಷ್ಟವೇ ಹೊರತು, ಯಾವುದೇ ಫಲವಿಲ್ಲ. ಕೆಲವು ಕಡೆಯಲ್ಲಿ ಇನ್ನೂ ಪೈರು ಬೆಳೆದಿಲ್ಲ. ಅತಿವೃಷ್ಟಿಯಿಂದ ರೈತರು ಭಾರಿ ಸಮಸ್ಯೆ ಎದುರಿಸಿದ್ದಾರೆ. -ದೀಕ್ಷಿತ್ ನಾಯಕ್ ಕುಡಿಬೈಲು, ಕುಚ್ಚೂರು ಶಾಂತಿನಿಕೇತನ ಅಧ್ಯಕ್ಷ https://www.vijayavani.net/lions-club-social-work-commendable https://www.vijayavani.net/art-helps-to-forget-pain