ಚಿಕ್ಕಮಗಳೂರಿನಲ್ಲಿ ಗುಡುಗು-ಸಿಡಿಲು ಸಹಿತ ಆಲಿಕಲ್ಲು ಮಳೆ

7 ckm 4
ಚಿಕ್ಕಮಗಳೂರಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಎಂಜಿ ರಸ್ತೆ ಎರಡನೇ ತಿರುವಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬೈಕುಗಳು ಜಲಾವೃತಗೊಂಡಿರುವುದು.
Published on

ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಕಾಫಿ ನಾಡಿನಲ್ಲಿ ಮಂಗಳವಾರ ಗುಡುಗು-ಸಿಡಿಲು ಸಹಿತ ಭರ್ಜರಿ ಆಲಿಕಲ್ಲು ಮಳೆಯಾಗಿದೆ. ಹಲವೆಡೆ ಮನೆ, ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.

ಬೆಳಗಿನಿಂದಲೇ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಸಣ್ಣದಾಗಿ ಗುಡುಗು ಆರಂಭಗೊಂಡಿತ್ತು. ಆದರೆ ಬಳಿಕ ಮೋಡ ಸರಿದು ಬಿಸಿಲಿನ ವಾತಾವರಣ ಮೂಡಿತು. ಹೀಗಾಗಿ ಮಳೆ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗಾಗಲೇ ಏಕಾಏಕಿ ಮೋಡ ಆವರಿಸಿ ಧಾರಾಕಾರ ಮಳೆ ಸುರಿಯಿತು.
ಮಧ್ಯಾಹ್ನ 2 ಗಂಟೆಯಿಂದ ಸತತ ಒಂದು ಗಂಟೆಗಳ ಕಾಲ ಗುಡುಗು-ಸಿಡಿಲು, ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ರಸ್ತೆಯಲ್ಲಿ, ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆ ಬರುವ ಮುನ್ಸೂಚನೆ ಇಲ್ಲದೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬಂದವರು ಧಾರಾಕಾರ ಮಳೆಯಿಂದಾಗಿ ಪರಿತಪಿಸುವಂತಾಗಿತ್ತು.
ಮಳೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲುಗಳು ಸುರಿದ ಪರಿಣಾಮ ಕಪ್ಪಾಗಿದ್ದ ರಸ್ತೆಗಳು ಬಿಳಿ ಬಣ್ಣಕ್ಕೆ ತಿರುಗಿದ್ದವು. ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿರುವುದು ವಿಶೇಷವಾಗಿತ್ತು. ಗುಡುಗು-ಸಿಡಿಲನ್ನು ಲೆಕ್ಕಿಸದೆ ಜನ ಆಲಿಕಲ್ಲುಗಳಿಗೆ ಮುಗಿ ಬಿದ್ದಿದ್ದು ಸಾಮಾನ್ಯವಾಗಿತ್ತು.
15 ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಸಾಮಾನ್ಯ ಮಳೆಯಾಗಿತ್ತು. ಆದರೆ ಬಳಿಕ ಬಿರು ಬಿಸಿಲು ಹೆಚ್ಚಾಗಿದ್ದರಿಂದಾಗಿ ವಿಪರೀತ ಸೆಖೆ ಆರಂಭಗೊಂಡಿತ್ತು. ಇದೆ ವೇಳೆಗೆ ಚಿಕ್ಕಮಗಳೂರಿನ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಸಹ ದಾಖಲಾಗಿತ್ತು. ಇದರಿಂದಾಗಿ ಬಿಸಿಲಿನಿಂದ ಜನ ಕಂಗೆಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆಯಲ್ಲಿಯೇ ಧಾರಾಕಾರ ಮಳೆಯಾಗಿರುವುದರಿಂದ ಕಾಫಿ ನಾಡು ಚಿಕ್ಕಮಗಳೂರು ತಂಪಾಗಿದೆ.
ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದರಿಂದ ನಗರದ ವಿವಿಧೆಡೆ ಮನೆಯ ಮೇಲೆ ಅಳವಡಿಸಲಾಗಿದ್ದ ಸೋಲಾರ್ ಪ್ಯಾನೆಲ್ಗಳು ಹಾನಿಗೊಳಗಾಗಿವೆ. ಆಲಿಕಲ್ಲುಗಳು ಬೀಳುವ ಯಾವುದೇ ಮುನ್ಸೂಚನೆ ಇಲ್ಲದ ಕಾರಣದಿಂದಾಗಿ ಸೋಲಾರ್ ಪ್ಯಾನೆಲ್‌ಗಳಿಗೆ ಯಾವುದೇ ಹೊದಿಕೆ ಮುಚ್ಚಿರಲಿಲ್ಲ. ಈ ವೇಳೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲುಗಳು ಸೋಲಾರ್ ಪ್ಯಾನೆಲ್ ಮೇಲೆ ಬಿದ್ದಿದ್ದರಿಂದಾಗಿ ಪ್ಯಾನಲ್ಗಳಿಗೆ ಹಾನಿ ಉಂಟಾಗಿದೆ.
ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು. ಎಂ.ಜಿ.ರಸ್ತೆಯ ಎರಡನೇ ತಿರುವಿನಲ್ಲಿ ಮಳೆಯ ನೀರು, ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೆ ಅಕ್ಕಪಕ್ಕದಲ್ಲಿರುವ ಅಂಗಡಿ ಮುಂಗಟ್ಟುಗಳು ಹಾಗೂ ಮನೆಗಳಿಗೆ ನುಗ್ಗಿತು. ಇದಲ್ಲದೆ ರಸ್ತೆ ಮೇಲೆಯೇ ಎರಡು ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡಿದ್ದವು. ಇನ್ನು ಅಗಸರ ಬೀದಿಯಲ್ಲಿಯೂ ಕೆಲ ಮನೆಯೊಳಗೆ ನೀರು ನುಗ್ಗಿದೆ. ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರಹಾಕಲು ಜನ ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net