

ಸದೇಶ್ ಕಾರ್ಮಾಡ್ ಮೈಸೂರು
ಪ್ಲಾಸ್ಟಿಕ್ ಮುಕ್ತ ಮೈಸೂರು ನಗರ ನಿರ್ಮಾಣಕ್ಕೆ ಪಣ ತೊಟ್ಟಿರುವ ನಗರ ಪಾಲಿಕೆಯು ನಗರದಲ್ಲಿ ಪ್ಲಾಸ್ಟಿಕ್ ಬಳಸುವವರ ವಿರುದ್ಧ ದಂಡ ಪ್ರಯೋಗಕ್ಕೆ ಮುಂದಾಗಿದೆ. ನಗರ ಪಾಲಿಕೆ ನಿಷೇಧಿಸಿರುವ ಪಟ್ಟಿಯಲ್ಲಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಇನ್ನು ಮುಂದೆ ತಯಾರಿಸಿ ದರೆ ಹಾಗೂ ಬಳಕೆ ಮಾಡುವುದು ಕಂಡು ಬಂದರೆ 200 ರೂ.ನಿಂದ 2 ಲಕ್ಷ ರೂ.ವರೆಗೂ ದಂಡ ಬೀಳಲಿದೆ.
ನಗರ ಪಾಲಿಕೆ ಸಾಕಷ್ಟು ಬಾರಿ ಪ್ಲಾಸ್ಟಿಕ್ ಬಳಕೆ ತಡೆಗೆ ದಾಳಿಗಳನ್ನು ನಡೆಸಿ ದಂಡ ವಿಧಿಸಿದೆ. ಆದರೆ, ಎಷ್ಟು ಪ್ರಮಾಣದ ದಂಡ ವಿಧಿಸ ಬೇಕು ಎಂಬುದಕ್ಕೆ ಪಾಲಿಕೆ ಬಳಿ ಮಾನದಂಡ ಇರಲಿಲ್ಲ. ಸಾರ್ವಜನಿಕರಿಗೆ 100 ರೂ. ದಂಡ ವಿಧಿಸಲಾಗುತಿತ್ತು. ಉತ್ಪಾದಕರು ಹಾಗೂ ಮಾರಾಟಗಾರ ಬಳಿ ದಾಳಿ ಸಂದರ್ಭ ದೊರೆಯುತ್ತಿದ್ದ ಪ್ಲಾಸ್ಟಿಕ್ ಪ್ರಮಾಣದ ಆಧಾರವಾಗಿಟ್ಟುಕೊಂಡು ಅಂದಾಜು ಮೇಲೆ ದಂಡ ವಿಧಿಸ ಲಾಗುತಿತ್ತು. ನಿರ್ದಿಷ್ಟವಾಗಿ ಇಂತಿಷ್ಟು ದಂಡ ವಿಧಿಸಬೇಕು ಎಂಬ ಮಾನದಂಡ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಇದೀಗ ಪ್ಲಾಸ್ಟಿಕ್ ಬಳಕೆಗೆ ದಂಡ ಪ್ರಮಾಣವನ್ನು ನಿಗದಿ ಪಡಿಸಿದ್ದು, ಪಾಲಿಕೆ ಕೌನ್ಸಿಲ್ ಸಭೆಯ ನಂತರ ಹೊಸ ದಂಡ ವ್ಯವಸ್ಥೆ ಜಾರಿಗೆ ಬರಲಿದೆ.
ಯಾವುದೆಲ್ಲ ನಿಷೇಧ?: ನಗರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್‌ನಿಂದ ತಯಾರಾಗುವ ಇತರೆ ವಸ್ತುಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಕಂಡು ಬಂದರೆ ಅಂಥವರಿಗೆ ದುಬಾರಿ ದಂಡ ಬೀಳಲಿದೆ.
ಪ್ಲಾಸ್ಟಿಕ್ ನಿಷೇಧ ಅಂದ ಮಾತ್ರಕ್ಕೆ ಎಲ್ಲ ಪ್ಲಾಸ್ಟಿಕ್ ಬಳಕೆ ನಿಷೇಧಿತವಲ್ಲ. ಕೆಲವೊಂದು ಉತ್ಪನ್ನಗಳನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ಬಳಕೆ ಮಾಡಲಾಗಿರುತ್ತದೆ. ಇದಕ್ಕೆ ಸರ್ಕಾರದ ಅನುಮತಿ ಇರುವ ಹಿನ್ನೆಲೆಯಲ್ಲಿ ಅಂತಹ ಉತ್ಪನ್ನಗಳನ್ನು ನಗರದಲ್ಲಿ ಮಾರಾಟ ಮಾಡಲು ಯಾವುದೇ ರೀತಿಯ ಅಡ್ಡಿ ಇಲ್ಲ. ಈ ರೀತಿಯ ಉತ್ಪನ್ನಗಳಿಂದ ಸೃಷ್ಟಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆ ಕಾರ್ಯ ನಗರದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಬಾರ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪತಿಯಾಗುವ ಟೆಟ್ರಾಪ್ಯಾಕ್, ಮನೆಗಳಲ್ಲಿ, ಅಂಗಡಿಗಳಲ್ಲಿ ಉತ್ಪತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ನಗರದ ಸೂಯೇಜ್ ಫಾರ್ಮ್‌ನಲ್ಲಿ ಪ್ಲಾಸ್ಟಿಕ್ ಕುರ್ಚಿ, ಮೇಜು, ಬಕೆಟ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನಗರ ಪಾಲಿಕೆ ಹಾಗೂ ಜಾಗೃತ್ ಟೆಕ್ ಸಂಸ್ಥೆಯ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ.
ಸೂಯೇಜ್ ಫಾರ್ಮ್‌ನಲ್ಲಿ ಜಾಗೃತ್ ಟೆಕ್ ಸಂಸ್ಥೆಗೆ ಯಂತ್ರೋಪಕರಣ ಅಳವಡಿಕೆಗೆ ನಗರ ಪಾಲಿಕೆ ಜಾಗ ನೀಡುವ ಜತೆಗೆ ನಗರದ ಬಾರ್‌ಗಳು, ಅಂಗಡಿಗಳು, ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ನೀಡುತ್ತಿದೆ. ಬಾರ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿನಿತ್ಯ ಟೆಟ್ರಾ ಪ್ಯಾಕ್ ಸಂಗ್ರಹವಾಗುತ್ತಿದೆ. ಈ ಹಿಂದೆ ಈ ಟೆಟ್ರಾಪ್ಯಾಕ್‌ಗಳನ್ನು ಸುಡಲಾಗುತಿತ್ತು. ಆದರೆ, ಇದೀಗ ಅದೇ ಟೆಟ್ರಾಪ್ಯಾಕ್ ಬಳಕೆ ಮಾಡಿಕೊ ಂಡು ಹಲವು ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನಗರ ಪಾಲಿಕೆ ಕೇವಲ ಪ್ಲಾಸ್ಟಿಕ್ ಬಳಕೆ ನಿಷೇಧ, ದಂಡ ವಿಧಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಕೆಯ ಕಡೆಗೂ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ವಿಚಾರ.
ಕಡಿಮೆಯಾದ ಪ್ಟಾಸ್ಟಿಕ್ ಬಳಕೆ: ನಗರದಲ್ಲಿ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತಿತ್ತು. ಆದರೆ, ನಗರ ಪಾಲಿಕೆ ಅಧಿಕಾರಿಗಳು ನಿರಂತರ ಜಾಗೃತಿ ಹಾಗೂ ದಾಳಿಗಳನ್ನು ನಡೆಸಿದ ಪರಿಣಾಮ ಪ್ಲಾಸ್ಟಿಕ್ ಬಳಕೆ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಮಾಲ್‌ಗಳು ಹಾಗೂ ಸಾಕಷ್ಟು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಿ ಕಾಗದದ ಕವರ್, ಬಟ್ಟೆ ಬ್ಯಾಗ್ ಬಳಕೆ ಹೆಚ್ಚಾಗಿದೆ. ಆದರೆ, ಇನ್ನೂ ಹಲವಾರು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮುಂದುವರೆದಿರುವುದು ಕಂಡು ಬಂದಿದ್ದು, ಇದಕ್ಕೆ ಕಡಿವಾಣ ಹಾಕಿ ನಗರದ ಪರಿಸರವನ್ನು ಉಳಿಸುವ ಕಾರ್ಯ ಆಗಬೇಕಾಗಿದೆ.
ಪ್ಲಾಸ್ಟಿಕ್ ಬಳಕೆ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ ನಂತರ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಎಲ್ಲ ಅಂಗಡಿ ಮುಂಗಟ್ಟುಗಳಲ್ಲೂ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಲಾಗುವುದು. ಸಹಕರಿಸದೆ ಇರುವವರಿಗೆ ದಂಡ ವಿಧಿಸಲು ದಂಡದ ಪ್ರಮಾಣ ನಿಗದಿ ಪಡಿಸಲಾಗಿದ್ದು, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದ ದಂಡ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುವುದು. ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ನಾಗರಿಕರ ಸಹಕಾರ ಅವಶ್ಯಕ.
ಡಾ.ಡಿ.ಜಿ. ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ