ಮಣ್ಣಿನ ಗಣಪತಿಗೆ ಭಾರಿ ಡಿಮಾಂಡ್

Ganapati Fastival
Published on

ರಾಣೆಬೆನ್ನೂರ: ಗಣೇಶ ಚತುರ್ಥಿ ಈ ಬಾರಿ ಅದ್ದೂರಿ ಆಚರಣೆಯ ಸ್ವರೂಪ ಪಡೆಯಲಿದ್ದು, ನಗರದಲ್ಲಿ ಗಣಪತಿ ಮೂರ್ತಿ ತಯಾರಿಕೆ ಭರದಿಂದ ಸಾಗಿದೆ. ಹಬ್ಬಕ್ಕೆ ಇನ್ನೆರಡು ದಿನ ಬಾಕಿಯಿರುವ ಕಾರಣ ಕಲಾವಿದರಿಗೆ ಸದ್ಯ ಕೈತುಂಬ ಕೆಲಸ.

ಅನಾದಿಕಾಲದಿಂದಲೂ ನೈಸರ್ಗಿಕ ಗಣಪತಿ ಮಾಡಿಕೊಂಡು ಬಂದಿರುವ ಕಲಾವಿದರು ಬಿಡುವಿಲ್ಲದಂತೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮೀಣ ಭಾಗದ ಕೆರೆಗಳಿಂದ ಮಣ್ಣು ತಂದು ಶಾಸ್ತ್ರೋಕ್ತವಾಗಿ ಗಣಪತಿ ಮೂರ್ತಿಗಳನ್ನು ತಯಾರಿಸಿ, ನೈಸರ್ಗಿಕ ಬಣ್ಣ ನೀಡುವಲ್ಲಿ ತಲ್ಲೀನರಾಗಿದ್ದಾರೆ.

ಮೂರ್ತಿಗಳನ್ನು ವಿಸರ್ಜನೆ ಮಾಡುವ ಬಾವಿ, ಕೆರೆಯ ನೀರು, ಪರಿಸರ ಹಾಳಾಗದಂತೆ ಮೂರ್ತಿಗಳಿಗೆ ಬಣ್ಣ ಬಳಸಿ ಸಿಂಗರಿಸಲಾಗುತ್ತಿದೆ. ಪುಣೆಯ ದಗೂಡುಶೇಟ್, ಹಾವಿನ ಮೇಲೆ, ಬಸವಣ್ಣನ ಮೇಲೆ ಕುಳಿತ ಗಣಪತಿ, ಗೌರಿ ಗಣೇಶ, ಸಾಯಿಬಾಬಾ, ಕೃಷ್ಣನ ಅವತಾರ, ಬ್ರಹ್ಮನ ಸ್ವರೂಪ ಸೇರಿ ವಿವಿಧ ಭಂಗಿಗಳಲ್ಲಿ ಗಣೇಶನ ಮೂರ್ತಿ ರೂಪುಗೊಳ್ಳುತ್ತಿವೆ.

ಭಾರಿ ಬೇಡಿಕೆ

ಪಿಒಪಿ ಗಣಪತಿ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಿದ ಹಿನ್ನೆಲೆಯಲ್ಲಿ ನೈಸರ್ಗಿಕ ಗಣಪತಿ ಮೂರ್ತಿಗೆ ಭಾರಿ ಬೇಡಿಕೆ ಬಂದಿದೆ. ನಗರದ ಕುರುಬಗೇರಿ, ಮಾರುತಿ ನಗರ ಸೇರಿ ನಗರದ ವಿವಿಧೆಡೆ ನೈಸರ್ಗಿಕ ಗಣಪತಿ ತಯಾರಿಸಲಾಗುತ್ತಿದ್ದು, ಗ್ರಾಹಕರು ಈಗಾಗಲೇ ತಮಗೆ ಇಷ್ಟವಾದ ಗಣಪತಿ ಮೂರ್ತಿ ಆಯ್ಕೆ ಮಾಡಿ, ಮುಂಗಡವಾಗಿ ಹಣ ಕೊಟ್ಟು ಕಾಯ್ದಿರಿಸುತ್ತಿದ್ದಾರೆ.

ಬೆಲೆಯಲ್ಲಿ ಹೆಚ್ಚಳ

ಕಳೆದ ಬಾರಿ ಗಣಪತಿ ಮೂರ್ತಿಗಳಿಗೆ ಇದ್ದ ಬೆಲೆಗಿಂತ ಈ ವರ್ಷ 250ರಿಂದ 500 ರೂ. ವರೆಗೂ ಹೆಚ್ಚಳವಾಗಿದೆ. ಮೂರ್ತಿಗಳನ್ನು ಪಡ್ಡಿ ಅಚ್ಚುಗಳ ಸಹಾಯವಿಲ್ಲದೇ ಕೈಯಿಂದಲೇ ತಯಾರಿಸುವುದರಿಂದ ಒಂದು ತಿಂಗಳು ಮುಂಚಿತವಾಗಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುತ್ತೇವೆ. ವಿವಿಧ ಬಗೆಯ ಬಣ್ಣ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಾಗಿರುವ ಕಾರಣ ಬೆಲೆ ಏರಿಕೆ ಅನಿವಾರ್ಯವಾಗಿದೆ. ಕೈಯಿಂದಲೇ ತಯಾರಿಸುವ ಗಣಪತಿಗಳನ್ನು ಜನ ಇಷ್ಟಪಡುತ್ತಾರೆ. ಜತೆಗೆ ನೈಸರ್ಗಿಕ ಗಣಪತಿಗಳನ್ನು ಹೆಚ್ಚಿನ ಬೆಲೆ ನೀಡಿ ಮುಂಗಡವಾಗಿಯೇ ಕಾಯ್ದಿರಿಸುತ್ತಾರೆ ಎಂದು ತಯಾರಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

21 ಅಡಿ ಎತ್ತರದ ಮಣ್ಣಿನ ಗಣಪತಿ

ರಾಣೆಬೆನ್ನೂರ ಮಾತ್ರವಲ್ಲದೆ ಸುತ್ತಲಿನ ಜಿಲ್ಲೆಯ ಜನರ ಆಕರ್ಷಣೆಯಾಗಲಿರುವ 21 ಅಡಿ ಎತ್ತರದ ರಾಣೆಬೆನ್ನೂರ ಕಾ ರಾಜಾ ಗಣಪತಿ ಮೂರ್ತಿಯನ್ನು ಮಣ್ಣಿನಿಂದ ಮಾಡುತ್ತಿರುವುದು ವಿಶೇಷವಾಗಿದೆ. ಕಲಾವಿದರು ಬತ್ತದ ಹುಲ್ಲು, ಮಣ್ಣು ಸೇರಿ ನೈಸರ್ಗಿಕ ಸಾಮಗ್ರಿ ಬಳಸಿ ಗಣಪತಿ ಮಾಡುತ್ತಿರುವುದು ಗಮನ ಸೆಳೆದಿದೆ.

ಪ್ರಸಕ್ತ ವರ್ಷ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆಯಿದೆ. ಹಬ್ಬ ಸಮೀಪಿಸಿದಾಗ ಪಿಒಪಿ ಮೂರ್ತಿ ಮಾರಾಟ ಮಾಡುವವರ ಮೇಲೆ ಅಧಿಕಾರಿಗಳು ನಿಗಾವಹಿಸಬೇಕು. ಅಂದಾಗ ಮಣ್ಣಿನ ಮೂರ್ತಿ ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. | ಬಸವರಾಜ ಹೊಸಮಠ, ನೈಸರ್ಗಿಕ ಗಣಪತಿ ಮೂರ್ತಿ ತಯಾರಕ ಪಿಒಪಿ ಗಣಪತಿಗಳನ್ನು ಕೆರೆ, ಬಾವಿಗಳಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಆದ್ದರಿಂದ ಎಲ್ಲರೂ ನೈಸರ್ಗಿಕವಾಗಿ ತಯಾರಿಸಿದ ಗಣೇಶ ವಿಗ್ರಹಗಳಿಗೆ ಆದ್ಯತೆ ನೀಡಿ, ಅವುಗಳನ್ನೇ ಪ್ರತಿಷ್ಠಾಪಿಸಬೇಕು. ಆ ಮೂಲಕ ಪರಿಸರ ಕಾಳಜಿಗೆ ನಗರಸಭೆಯೊಂದಿಗೆ ಕೈಜೋಡಿಸಬೇಕು. | ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net