

ಸೋಮು ಲದ್ದಿಮಠ ರೋಣ
ಕರೊನಾ ಸೋಂಕಿತರು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ನಾಟಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಕೆಲ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರತೊಡಗಿದೆ.
ಗ್ರಾಮಾಂತರ ಪ್ರದೇಶದ ನಾಟಿ ಕೋಳಿ ಮಾರಾಟ ಮಾಡುವವರು ಪ್ರತಿದಿನ ಬೆಳ್ಳಂಬೆಳಗ್ಗೆಯೇ ಪಟ್ಟಣಕ್ಕೆ ಬರುತ್ತಾರೆ. ಈಗ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯೊಳಗೆ ಮಾರಾಟ ಮಾಡಿ ಹೋಗುತ್ತಿರುವುದು ಸಾಮಾನ್ಯವಾಗಿದೆ.
ನಾಟಿ ಕೋಳಿ ಮಾಂಸದಲ್ಲಿ ಪ್ರೋಟಿನ್, ವಿಟಮಿನ್ ಅಂಶಗಳು ಹೆಚ್ಚಾಗಿರುತ್ತವೆ. ದೇಹದ ಮಾಂಸಖಂಡಗಳು ಗಟ್ಟಿಯಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಟಿ ಕೋಳಿ ಮಾಂಸ, ಮೊಟ್ಟೆಗಳಿಗೆ ಬೇಡಿಕೆ ಬಂದಿದೆ. ಕಳೆದ ವರ್ಷ ಒಂದು ನಾಟಿ ಕೋಳಿಗೆ 250 ರೂಪಾಯಿ ಬೆಲೆ ಇತ್ತು. ಈಗ 400 ರೂಪಾಯಿಗಿಂತ ಹೆಚ್ಚಾಗಿದೆ. ಇದು ಕೊಂಚ ದುಬಾರಿ ಎನಿಸಿದರೂ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿದೆ.
ಕೋವಿಡ್ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರೋಟಿನ್ಯುುಕ್ತ ಆಹಾರ ಸೇವನೆ ಒಳ್ಳೆಯದು. ಆ ನಿಟ್ಟಿನಲ್ಲಿ ನಾಟಿ ಕೋಳಿ ಹಾಗೂ ಅದರ ಮೊಟ್ಟೆಯಲ್ಲಿ ಪ್ರೋಟಿನ್ ಅಂಶ ಹೆಚ್ಚಿರುವುದರಿಂದ ರೋಗಿಗಳು ಇದರ ಸೇವನೆ ಮಾಡುವುದು ಒಳ್ಳೆಯದು.| ಡಾ. ಅರವಿಂದ ಕಂಬಳಿ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸವಡಿ, ರೋಣ ತಾಲೂಕುನಾಟಿ ಕೋಳಿ ಮಾಂಸ ರುಚಿಕರವಾಗಿರುವ ಕಾರಣ ಮಾಂಸಪ್ರಿಯರು ತುಂಬಾ ಇಷ್ಟಪಡುತ್ತಾರೆ. ನಾಟಿ ಕೋಳಿ ಮೊಟ್ಟೆ ಸಹ ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮೊಟ್ಟೆಯೊಂದಕ್ಕೆ 8ರಿಂದ 10 ಬೆಲೆ ಇದ್ದರೂ ಬೇಡಿಕೆ ಇದೆ.| ಹನುಮಂತಪ್ಪ ತಳ್ಳಿಕೇರಿ, ಗ್ರಾಹಕಈ ಮೊದಲು ಬೆಳಗ್ಗೆ ನಾಲ್ಕು ನಾಟಿ ಕೋಳಿ ತೆಗೆದುಕೊಂಡು ಮಾರಾಟ ಮಾಡಲು ರೋಣಕ್ಕೆ ಹೋದರೆ ಅವು ಮಾರಾಟವಾಗಲು ಸಂಜೆಯಾಗುತ್ತಿತ್ತು. ಜನರು ಬಾಯಿಗೆ ಬಂದ ಹಾಗೆ ಕೋಳಿಗೆ ಬೆಲೆ ಕಟ್ಟುತ್ತಿದ್ದರು. ಆದರೆ, ಈಗ ಬೆಳಗ್ಗೆ 8 ಗಂಟೆಯ ಹೊತ್ತಿಗೆ ರೋಣಕ್ಕೆ ನಾಲ್ಕು ಕೋಳಿಗಳನ್ನು ತೆಗೆದುಕೊಂಡು ಹೋದರೆ 9 ಗಂಟೆಯೊಳಗೆ ಮಾರಾಟವಾಗುತ್ತವೆ. ಬೆಲೆಯ ಬಗ್ಗೆಯೂ ಚೌಕಾಸಿ ಇಲ್ಲ.| ಬಸಮ್ಮ ವಾಲಿಕಾರ, ರೈತ ಮಹಿಳೆ