

ಸೋಮವಾರಪೇಟೆ: ತಾಲೂಕಿನ ಪುಷ್ಪಗಿರಿ ತಪ್ಪಲು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಹಾನಿಯಾಗಿದೆ.
ಮಳೆ-ಗಾಳಿಯಿಂದ ವಾರದಿಂದ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ. ಕೊಲ್ಲಿ, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ಭತ್ತದ ಸಸಿ ನೀರಿನಿಂದ ಅವೃತವಾಗಿವೆ. ಜನರು ಮನೆಯಲ್ಲಿ, ಜಾನುವಾರುಗಳು ಕೊಟ್ಟಿಗೆಯಲ್ಲೇ ಇರಬೇಕಾದ ದುಸ್ಥಿತಿ ಎದುರಾಗಿದೆ. ಅನೇಕ ಮನೆಗಳ ಸೀಟ್‌ಗಳು ಹಾರಿಹೋಗಿದ್ದು, ಬೇರೆಯವರ ಮನೆಯಲ್ಲಿ ವೃದ್ಧರು ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ.
ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ, ಸೂರ್ಲಬ್ಬಿ ಮುಟ್ಲು, ಹಮ್ಮಿಯಾಲ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸೂರ್ಲಬ್ಬಿ ಪ್ರೌಢಶಾಲೆ ಕಟ್ಟಡದ ಮೇಲೆ ವೇದಿಕೆಯ ಶೀಟ್‌ಗಳು ಬಿದ್ದಿವೆ. ಶಾಲೆ ರಜೆ ಇದ್ದ ಕಾರಣ ಅನಾಹುತ ತಪ್ಪಿದಂತಾಗಿದೆ.
ಸೂರ್ಲಬ್ಬಿ ಗ್ರಾಮದ ತಂಬುಕುತ್ತಿರ ಬಿದ್ದಪ್ಪ ಮತ್ತು ಪಳಂಗಪ್ಪ ಅವರ ವಾಸದ ಮನೆಯ ಛಾವಣಿ ಹಾರಿಹೋಗಿವೆ. ನಾಪಂಡ ರಾಮಪ್ಪ ಅವರ ಕೊಟ್ಟಿಗೆಗೂ ಹಾನಿಯಾಗಿದೆ.