

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರವೂ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಲ್ಲಿ ಅಪಾರ ಬೆಳೆ ಹಾಗೂ ಆಸ್ತಿ ನಷ್ಟವಾಗಿದೆ. ಜತೆಗೆ ಹಲವು ಗ್ರಾಮಗಳಿಗೆ ಜಲದಿಗ್ಬಂಧನ ಭೀತಿಯೂ ಎದುರಾಗಿದೆ.
ವರುಣನ ಅಬ್ಬರ ಜೋರಾಗಿದ್ದ ಕಾರಣ ಜಿಲ್ಲಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು. ಸತತ ಮಳೆಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಶುಕ್ರವಾರವೂ ಬೆಳಗ್ಗಿನಿಂದಲೇ ಮಳೆ ಆರ್ಭಟ ಮುಂದುವರಿಯಿತು. ಕಪಿಲಾ, ಲಕ್ಷ್ಮಣತೀರ್ಥ ನದಿಗಳ ಭೋರ್ಗರೆತದಿಂದಾಗಿ ಪ್ರವಾಹದ ಯಥಾಸ್ಥಿತಿ ಮುಂದುವರಿದಿದೆ.
ಪ್ರವಾಹದಿಂದಾಗಿ ಜಿಲ್ಲೆಯ ಅನೇಕ ರಸ್ತೆಗಳಲ್ಲಿನ ಸಂಚಾರ ಬಂದ್ ಮಾಡಲಾಗಿತ್ತು. ಹಲವು ಗ್ರಾಮ, ಪಟ್ಟಣಗಳ ಜನರು ಸಂಪರ್ಕ ಕಡಿದುಕೊಂಡು ಸಂಕಷ್ಟಕ್ಕೆ ಸಿಲುಕಿದರು. ಎಚ್.ಡಿ.ಕೋಟೆ, ಹುಣಸೂರು, ನಂಜನಗೂಡು, ಪಿರಿಯಾಪಟ್ಟಣ ಹಾಗೂ ಸರಗೂರು ತಾಲೂಕಿನಲ್ಲಿ ನೆರೆ ಹೆಚ್ಚಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮುಂಗಾರು ಆರ್ಭಟ ಮುಂದುವರಿದಿದೆ. ಬೆಳಗ್ಗಿನಿಂದಲೇ ನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯಿತು. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನಗರದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಿಶೇಷವಾಗಿ ದ್ವಿಚಕ್ರ ಸವಾರರು ಸಮಸ್ಯೆ ಎದುರಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಉತ್ತಮವಾಗಿ ಸುರಿದ ಮಳೆ ನಂತರ ಸ್ವಲ್ಪ ಬಿಡುವು ನೀಡಿತು.
ಕಳೆದ ಒಂದು ವಾರದಿಂದ ಕೊಡಗಿನ ಇರ್ಪು ಭಾಗ ಸೇರಿದಂತೆ ಹುಣಸೂರು ತಾಲೂಕಿನ ಹನಗೋಡು ಭಾಗದಲ್ಲಿ ಜಡಿಮಳೆ ಹಿಡಿದಿದ್ದು, ಲಕ್ಷ್ಮಣತೀರ್ಥ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರವಾಹ ಹೆಚ್ಚುತ್ತಲಿದೆ. ನದಿ ಪಾತ್ರದ ಜಮೀನು ಹಾಗೂ ಹನಗೋಡು ಅಣೆಕಟ್ಟೆ ಹಿನ್ನೀರಿನಲ್ಲಿ ಸಾಕಷ್ಟು ಬೆಳೆಗಳು ಮುಳುಗಿ ರೈತರನ್ನು ಆತಂಕಕ್ಕೀಡು ಮಾಡಿದೆ.
ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚುತ್ತಲಿದ್ದು, ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹತ್ತಾರು ಹಳ್ಳಿಗಳಲ್ಲಿ ನದಿಯ ಹಿನ್ನೀರಿನಿಂದ ಹಲವಾರು ಬೆಳೆ ಬೆಳೆದಿದ್ದ ಪ್ರದೇಶಗಳಿಗೆ ನೀರು ನುಗ್ಗಿ ಬಹುತೇಕ ಶುಂಠಿ ಬೆಳೆ ನೀರಿನಲ್ಲಿ ಮುಳುಗಿ ಕೊಳೆಯುವ ಭೀತಿ ಉಂಟಾಗಿದೆ. ತಂಬಾಕು ಬೆಳೆ ನಿಂತ ನೀರಿನಿಂದ ಒಮ್ಮೆಲೆ ಎಲೆಗಳೆಲ್ಲ ಹಣ್ಣಾಗಿವೆ. ಮಳೆ ಹೀಗೆ ಮುಂದುವರಿದಲ್ಲಿ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಹನಗೋಡು ಅಣೆಕಟ್ಟೆ ಹಿನ್ನೀರು ಬೆಳೆಗಳನ್ನು ಆವರಿಸಲಿದೆ.
ನಿರಂತರ ಮಳೆಯಿಂದಾಗಿ ಹುಣಸೂರು ತಾಲೂಕಿನ ಕಿರಂಗೂರಿನ ಕುಳ್ಳೇಗೌಡರ ವಾಸದ ಮನೆ, ನೇರಳಕುಪ್ಪೆಯ ಬಿ.ಹಾಡಿಯ ಶಾರದಾ ಅವರಿಗೆ ಸೇರಿದ ಮನೆ ಗೋಡೆೆ ಕುಸಿದಿದೆ. ಹಾಡಿಯ ಕೆಂಪಮ್ಮ ಅವರ ಮನೆ ಪಕ್ಕದಲ್ಲಿದ್ದ ದೊಡ್ಡ ಆಲದ ಮರ ಬುಡಸಮೇತ ಉರುಳಿ ಬಿದ್ದಿದೆ. ಮರದ ರೆಂಬೆ-ಕೊಂಬೆಗಳು ಕೆಂಪಮ್ಮ ಅವರ ಮನೆ ಮೇಲೆ ಬಿದ್ದು ಭಾಗಶಃ ಹಾನಿಯಾಗಿದೆ.
ಮಳೆಯಿಂದ ಹಾನಿಗೊಳಗಾಗಿರುವ ಹನಗೋಡು ಭಾಗದ ಗ್ರಾಮಗಳಿಗೆ ತಹಸೀಲ್ದಾರ್ ಜೆ.ಮಂಜುನಾಥ್ ಗುರುವಾರ ಭೆೇಟಿ ನೀಡಿ ಪರಿಶೀಲಿಸಿದರು. ಮನೆ ಹಾಗೂ ಬೆಳೆ ಹಾನಿಗೊಳಗಾದವರ ಬಗ್ಗೆ ವರದಿ ನೀಡಬೇಕೆಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶ್ರೀಕಂಠೇಶ್ವರನ ನೆಲೆವೀಡಾದ ನಂಜನಗೂಡಿನಲ್ಲಿ ಜಲ ದಿಗ್ಬಂಧನ ಮುಂದುವರಿದಿದೆ. ಮಲ್ಲನಮೂಲೆ ಮಠದ ಬಳಿ ಶುಕ್ರವಾರ ಮುಂಜಾನೆಯಿಂದಲೇ ಕಪಿಲ ನದಿ ಪ್ರವಾಹವು ಮೈಸೂರು-ನಂಜನಗೂಡು ಹೆದ್ದಾರಿಯನ್ನು ಆವರಿಸಿಕೊಂಡಿದೆ. ಇದರಿಂದ ತಮಿಳುನಾಡು, ಕೇರಳ ರಾಜ್ಯ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಪರದಾಡುವಂತಾಯಿತು.
ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ಸೇರಿದಂತೆ ನುಗು ಜಲಾಶಯದಿಂದ ಹೊರಹರಿವು ಹೆಚ್ಚಿರುವುದರಿಂದ ಕಪಿಲೆ ಪ್ರವಾಹ ಹೆಚ್ಚಾಗಿ ಮೈಸೂರು-ನಂಜನಗೂಡು ಮಾರ್ಗ ಶುಕ್ರವಾರ ಇಡೀ ದಿನ ಬಂದ್ ಆಗಿತ್ತು. ನಂಜನಗೂಡು-ಮೈಸೂರು ಹೆದ್ದಾರಿ ಬಂದ್ ಆಗಿದ್ದರಿಂದ ನಂಜನಗೂಡನಿಂದ ಮೈಸೂರಿಗೆ ಹುಲ್ಲಹಳ್ಳಿ, ರಾಂಪುರ, ಉದ್ಭೂರು ಮಾರ್ಗವಾಗಿ ಮೈಸೂರಿಗೆ ಹಾಗೂ ಮೈಸೂರಿನಿಂದ ಕಡಕೊಳ, ತಾಂಡ್ಯ ಕೈಗಾರಿಕಾ ಪ್ರದೇಶ, ಕೆಂಪಿಸಿದ್ದನಹುಂಡಿ, ಹೆಜ್ಜಿಗೆ ಮಾರ್ಗವಾಗಿ ಏಕಮುಖ ಸಂಚಾರಕ್ಕೆ ಶುಕ್ರವಾರ ಅನುವು ಮಾಡಿಕೊಡಲಾಗಿತ್ತು. ಹೆಜ್ಜಿಗೆ ಸೇತುವೆ ಮುಂಭಾಗದಲ್ಲೂ ಪ್ರವಾಹವು ಚಾಚಿ ನಿಂತಿದ್ದರಿಂದ ಬೈಕ್ ಸವಾರರು ಸೇತುವೆ ದಾಟಲು ಹೆಣಗಾಡುವಂತಾಯಿತು.
ನದಿಯ ಪ್ರವಾಹವೂ ಬೈಪಾಸ್ ರಸ್ತೆಯನ್ನೂ ಭೇದಿಸಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆವರಣವನ್ನೂ ಪ್ರವೇಶಿಸಿದೆ. ಕಪಿಲೆ ಹಾಗೂ ಗುಂಡ್ಲು ನದಿಗೆ ನಗರದ ಬಹುತೇಕ ಬಡಾವಣೆಗಳ ಚರಂಡಿ ತ್ಯಾಜ್ಯ ನೀರು ಬಿಡಲು ಸಂಪರ್ಕ ಕಲ್ಪಿಸಿದ್ದ ಪೈಪ್‌ಲೈನ್‌ನಲ್ಲಿ ಪ್ರವಾಹ ನೀರು ಹಿಮ್ಮುಖವಾಗಿ ಹರಿದು ಭಕ್ತಿ ಮಾರ್ಗ, ಮೋಕ್ಷ ಮಾರ್ಗ, ಪಾರ್ಕಿಂಗ್ ಆವರಣ, ಡಾರ್ಮೆಟರಿ, ದಾಸೋಹ ಭವನ ಸುತ್ತ ದ್ವೀಪದಂತಾಗಿದೆ. ಗುಂಡ್ಲು ನದಿಯ ಹರಿವು ಹೆಚ್ಚಾಗಿ ತಡೆಗೋಡೆಯನ್ನು ದಾಟಿ ದೇವಾಲಯದ ಆವರಣದತ್ತ ಪ್ರವಾಹ ನುಗ್ಗಿದೆ. ಇನ್ನು ರಾಘವೇಂದ್ರಸ್ವಾಮಿಗಳ ಮೂಲಮಠದ ಬೃಂದಾವನ, ಚಾಮುಂಡೇಶ್ವರಿ, ಕಾಶಿ ವಿಶ್ವೇಶ್ವರ, ದತ್ತಾತ್ರೇಯ ಗುಡಿ, ಅಯ್ಯಪ್ಪ ಸ್ವಾಮಿ, ಪರಶುರಾಮ ದೇವಾಲಯಗಳು ಮುಳುಗಿವೆ.
ಪ್ರವಾಹಕ್ಕೆ ತುತ್ತಾಗಿರುವ ನಂಜನಗೂಡು ನಗರದ ಹಳ್ಳದಕೇರಿ, ತೋಪಿನ ಬೀದಿ, ಕುರುಬಗೇರಿ, ಸರಸ್ವತಿ ಕಾಲನಿ ಸೇರಿದಂತೆ ತಾಲೂಕಿನ ಹೆಜ್ಜಿಗೆ, ತೊರೆಮಾವು, ಹುಲ್ಲಹಳ್ಳಿ, ಬೊಕ್ಕಹಳ್ಳಿ, ಸುತ್ತೂರು, ಕುಳ್ಳಂಕಯ್ಯನಹುಂಡಿ, ಕತ್ವಾಡಿಪುರ ಸೇರಿದಂತೆ ಬಹುತೇಕ ಕಡೆ ನೂರಾರು ಮನೆಗಳು ಜಲಾವೃತಗೊಂಡು ಅಪಾರ ನಷ್ಟ ಉಂಟಾಗಿದೆ. ಚರಂಡಿ ಪೈಪ್‌ಲೈನ್ ಹಾಗೂ ಬೈಪಾಸ್ ರಸ್ತೆಯಿಂದ ನುಗ್ಗಿರುವ ಪ್ರವಾಹವೂ ನಿವಾಸಿಗಳನ್ನು ಭಯಭೀತಿಗೊಳಿಸಿದೆ.
ಸರಗೂರು: ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಸರಗೂರಿನ ಸೋಮೇಶ್ವರ ದೇವಾಲಯ, 25 ಅಡಿ ಎತ್ತರದ ಈಶ್ವರ ಪುತ್ಥಳಿ ಹಾಗೂ 9ನೇ ವಾರ್ಡ್‌ನ ಜಪದಕಟ್ಟೆ ದೇವಸ್ಥಾನ ಹಾಗೂ ಓವರ್ ಹೆಡ್ ಟ್ಯಾಂಕ್ ಜಲಾವೃತಗೊಂಡಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಕೇರಳ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭಿತಿ ಎದುರಾಗಿದೆ. ಹೊಳೆ ದಡದಲ್ಲಿ ಇರುವ ಜನರು ಮನೆ ಬಿಟ್ಟು ಸಂಬಂಧಿಕರ ಮನೆಗಳನ್ನು ಸೇರಿಕೊಂಡಿದ್ದಾರೆ.
ನಂಜನಗೂಡು ತಾಲೂಕಿನ ಕಪ್ಪಸೋಗೆಯಲ್ಲಿ ಧಾರಾಕಾರ ಮಳೆಗೆ ರೈತರು ಬೆಳೆದಿದ್ದ ಬಹುತೇಕ ಬೆಳೆಗಳು ನೀರು ಪಾಲಾಗಿವೆ.
ಭತ್ತ, ಬಾಳೆ, ಶುಂಠಿ ಮುಂತಾದ ಬೆಳೆಗಳು ನಿರಂತರ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಪ್ಪಸೋಗೆ ಗ್ರಾಮದ ಕೆ.ಎನ್.ಮಲ್ಲಿಕಾರ್ಜುನಪ್ಪ, ಕೆ.ಎಂ.ಬಸವಣ್ಣ, ಕೆ.ಪಿ.ಮಲ್ಲಿಕಾರ್ಜುನಪ್ಪ, ಮಾಧು ಎಂಬುವರಿಗೆ ಸೇರಿದ್ದ ಸುಮಾರು 8 ರಿಂದ 10 ಎಕರೆಯಷ್ಟು ಬೆಳೆದಿದ್ದ ಭತ್ತ ಹಾಗೂ ಶುಂಠಿ ಬೆಳೆಗಳಿಗೆ ನುಗು ಜಲಾಶಯದಿಂದ ಬಿಟ್ಟ ನೀರಿನಿಂದ ಪ್ರವಾಹ ಉಂಟಾಗಿ ಬೆಳೆಗಳಿಗೆ ನುಗ್ಗಿದ್ದರಿಂದ ಅಪಾರ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಶುಕ್ರವಾರ ದಿಢೀರ್ ಎಂದು ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನಿಂದ 40 ಸಾವಿರ ಕ್ಯೂಸೆಕ್ ಗೆ ಇಳಿಕೆ ಮಾಡಲಾಯಿತು. ನಂತರ ಸಂಜೆ ವೇಳೆಗೆ 5 ಸಾವಿರ ಕ್ಯೂಸೆಕ್ ಹೆಚ್ಚುವರಿಯಾಗಿ ನೀರು ಬಿಡಲಾಯಿತು. ಇದರಿಂದ ನದಿ ಪಾತ್ರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಜಲಾಶಯ ಭರ್ತಿ ಆಗಲು ಇನ್ನೂ ನಾಲ್ಕು ಅಡಿ ಮಾತ್ರ ಬಾಕಿ ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 2280.01 ಇದೆ. ಒಳಹರಿವು 42,960 ಕ್ಯೂಸೆಕ್ ಹರಿದು ಬರುತ್ತಿದ್ದು, ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜತೆಗೆ ನುಗು ಜಲಾಶಯದಿಂದಲೂ ನದಿಗೆ 7,588 ಕ್ಯೂಸೆಕ್ ನೀರನ್ನು ಬಿಡಲಾಗಿದೆ.