

ಮುಂಡಗೋಡ: ಮಂಗಳವಾರ ರಾತ್ರಿಯಿಡೀ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಮಂಗಳವಾರ ಸಂಜೆ ಸಾಧಾರಣ ಮಳೆ ಆರಂಭವಾಯಿತು. ನಂತರ ಗುಡುಗು-ಸಿಡಿಲುಗಳ ಆರ್ಭಟದೊಂದಿಗೆ ಬುಧವಾರ ನಸುಕಿನ 4 ಗಂಟೆಯವರೆಗೂ ನಿರಂತರವಾಗಿ ಮಳೆಯಾಗಿದೆ. ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ನಿರಂತರವಾಗಿ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿದಿದ್ದು, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ.
ತಾಲೂಕಿನ ಚವಡಳ್ಳಿ, ಕ್ಯಾಸನಕೇರಿ ಮಧ್ಯದ ಹಳ್ಳ, ಹಾಗೂ ಬಡ್ಡಿಗೇರಿ ಸನಿಹದ ಹಳ್ಳ ಹಾಗೂ ಅಗಡಿ ಗ್ರಾಮದ ಬಳಿಯ ಮುಂಡಗೋಡ ಕಲಘಟಗಿ ಹೆದ್ದಾರಿಯ ಮೇಲೆ ಅಪಾರ ಪ್ರಮಾಣದ ನೀರು ಹರಿದು ರಾತ್ರಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಗೋವಿನಜೋಳ ಕಟಾವು ಮಾಡಿ ಒಣಗಿಸಲು ಹಾಕಿದ್ದ ಬೆಳೆಯಲ್ಲಿ ಮಳೆಯ ನೀರು ನುಗ್ಗಿ ಹಾನಿ ಸಂಭವಿಸಿದೆ. ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಭತ್ತದ ಬೆಳೆಯೂ ನೆಲ ಕಚ್ಚುವಂತಾಗಿದೆ. ಮಂಗಳವಾರ ರಾತ್ರಿಯಿಡೀ ತಾಲೂಕಿನಲ್ಲಿ 82.6 ಮಿಮೀ ಮಳೆಯಾಗಿದೆ.