

ಅನ್ಸಾರ್ ಇನೋಳಿ ಉಳ್ಳಾಲ
ಒಂದೆಡೆ ಮೈಸುಡುವ ಬಿಸಿಲು, ಮತ್ತೊಂದೆಡೆ ಬಿಸಿಗಾಳಿಯ ಆತಂಕ... ಇವೆರಡರ ಮಧ್ಯೆ ಮತ್ತೊಮ್ಮೆ ಮುಸ್ಲಿಮರ ಪವಿತ್ರ ತಿಂಗಳು ರಮಜಾನ್ ಆರಂಭಗೊಂಡಿದ್ದು ಉಪವಾಸ ವ್ರತ ಪೂರ್ತಿಗೊಳಿಸುವ ಸವಾಲು ಎದುರಾಗಿದೆ.
ನಾಲ್ಕು ವರ್ಷಗಳಿಂದ ಬೇಸಿಗೆಯಲ್ಲೇ ರಮಜಾನ್ ಬರುತ್ತಿದ್ದು, ಮುಂದಿನ ನಾಲ್ಕು ವರ್ಷ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಈ ಬಾರಿ ಮಾರ್ಚ್ 2ರಿಂದ ರಮಜಾನ್ ಆರಂಭಗೊಂಡಿದೆ. ಆದರೆ ಈ ಬಾರಿ ಬಿಸಿಲಿನ ಜತೆ ಬಿಸಿಗಾಳಿಯ ಅಬ್ಬರವೂ ಜೋರಾಗಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ಮೊಹರಂ ಆರಂಭಿಕ ತಿಂಗಳಾದರೆ ದುಲ್ಹಜ್ ಕೊನೆ ತಿಂಗಳು. ಎಲ್ಲ ತಿಂಗಳನ್ನು ಚಂದ್ರ ದರ್ಶನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಅಂದರೆ ತಿಂಗಳಿಗೆ 29 ಅಥವಾ 30 ದಿನ ಬರುತ್ತದೆ. ಒಂಬತ್ತನೇ ತಿಂಗಳು ರಮಜಾನ್ ಆಗಿದ್ದು ಇತರ ತಿಂಗಳುಗಳ ರಾಜ ಎನಿಸಿದೆ. ಪ್ರತಿ ವರ್ಷ 10ರಿಂದ 12 ದಿನ ಬೇಗ ರಮಜಾನ್ ಬರುತ್ತದೆ.
ಈ ತಿಂಗಳು ಪೂರ್ತಿ ನಸುಕಿನಿಂದ ಮುಸ್ಸಂಜೆವರೆಗೆ ಆರೋಗ್ಯವಂತರಿಗೆ ವ್ರತಾಚರಣೆ ಕಡ್ಡಾಯವಾಗಿದ್ದು, ಈ ಅವಧಿಯಲ್ಲಿ ಒಂದು ತೊಟ್ಟು ನೀರೂ ಸೇವಿಸುವಂತಿಲ್ಲ. ಈ ಬಾರಿ ವ್ರತಾಚರಣೆ ಸಮಯ 13 ಗಂಟೆ ದಾಟಿದೆ. ಆರಂಭದಲ್ಲಿ ನಸುಕಿನ ಅದ್ಸಾನ್ 5.27ರಿಂದ ಆರಂಭ ವ್ರತಾನುಷ್ಠಾನ ಮುಸ್ಸಂಜೆ 7.43ಕ್ಕೆ ಅಂತ್ಯವಾಗುತ್ತಿದೆ. ದಿನ ಕಳೆದಂತೆ ಸಮಯ ಹೆಚ್ಚುತ್ತಾ ಹೋಗುತ್ತದೆ.
*ನೀರಿನಂಶ ಹೆಚ್ಚಳ, ವೈದ್ಯರ ಸಲಹೆ: ಈ ಬಾರಿಯೂ ಬೇಸಿಗೆಯಲ್ಲಿ ರಮಜಾನ್ ಬಂದಿರುವುದರಿಂದ ಹಸಿವಿನ ಜಂಜಾಟವಿಲ್ಲ. ಅದರ ಬದಲು ಬಾಯಿ ಒಣಗುವ ಸಮಸ್ಯೆ ಹೊರತು ಇನ್ಯಾವುದೇ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬಂದಿಲ್ಲ. ಸಹರಿ(ವ್ರತ ಆರಂಭಿಸುವ ಸಂದರ್ಭ) ಮತ್ತು ಇಫ್ತಾರ್(ಉಪವಾಸ ಬಿಡುವ ಸಂದರ್ಭ) ನೀರಿನಂಶವುಳ್ಳ ಹಣ್ಣಿನ ರಸದ ಸಹಿತ ದ್ರವರೂಪದ ಲಘು ಆಹಾರ ಸೇವಿಸುವುದು ಮುಖ್ಯ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಖಾರದ ತಿಂಡಿಗಳನ್ನು ಬಳಸಿದರೆ ಗ್ಯಾಸ್ ಸ್ಟ್ರಿಕ್, ಎದೆಯುರಿ ಮತ್ತು ಹೊಟ್ಟೆಯುರಿಯಂಥ ಸಮಸ್ಯೆ ಎದುರಾಗಿ ಹೊಟ್ಟೆಯುಬ್ಬರಿಸಿಯೇ ಇರಬಹುದು. ಇದು ಸರಿಯಾಗಲು ಕನಿಷ್ಠ ಹತ್ತು ದಿನವಾದರೂ ಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಅಲರ್ಜಿ ಸಮಸ್ಯೆ ಇರುವವರು ಆರೆಂಜ್, ಕಲ್ಲಂಗಡಿ, ದ್ರಾಕ್ಷಿಯಂಥ ಹಣ್ಣಿನಿಂದ ದೂರವಿರಬೇಕು. ಯಾವುದೇ ಹಣ್ಣಿನ ಜೂಸ್‌ಗೆ ಹಾಲು ಬಳಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಬೇಕಾಬಿಟ್ಟಿ ಸೇವನೆಯಿಂದ ಕಾಯಿಲೆ
ಇತ್ತೀಚಿನ ದಿನಗಳಲ್ಲಿ ರಮಜಾನ್ ತೊರೆಯುವ ಸಂದರ್ಭ ನಡೆಯುವ ಇಫ್ತಾರ್ ಕೂಟಗಳಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳು, ಹಾಲು ಮಿಶ್ರಿತ ಹಣ್ಣಿನ ರಸದ್ದೇ ಕಾರುಬಾರು. ನಗರ ಪ್ರದೇಶದಲ್ಲಂತೂ ರಮಜಾನ್ ತಿಂಗಳನ್ನೇ ಮುಂದಿಟ್ಟುಕೊಂಡು ಆಹಾರ ಮೇಳವೂ ಆಯೋಜಿಸಿದ್ದು ಇಲ್ಲಿ ಸಿಗುವ ತಿಂಡಿ, ತಿನಿಸುಗಳನ್ನು ಬೇಕಾಬಿಟ್ಟಿ ಸೇವಿಸಿದರೆ ಕಾಯಿಲೆಗಳನ್ನು ಆಹ್ವಾನಿಸಿದಂತಾಗುತ್ತದೆ.
ಈ ಬಾರಿ ಬಿಸಿಲು ಮಾತ್ರವಲ್ಲದೆ ಬಿಸಿಗಾಳಿಯೂ ಇದೆ. ಅಗತ್ಯವಿದ್ದಾಗ ಮಾತ್ರ ಹೊರ ಹೋಗಬೇಕು. ಘನರೂಪದ ಆಹಾರಕ್ಕಿಂತ ದ್ರವ ರೂಪದ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ಬೇಕು. ಖಾರ ಮತ್ತು ಕರಿದ ತಿಂಡಿಗಳಿಂದ ದೂರವಿರುವುದು ಒಳಿತು. ಬಿಪಿ ಲೋ ಇರುವವರು ಜಾಗೃತರಾಗಿರುವುದು ಒಳಿತು. ಡಾ.ಪ್ರವೀಣ್ ರಾಜ್, ಹೋಮಿಯೋಪಥಿ ತಜ್ಞರು ವೃದ್ಧರು, ಬಾಣಂತಿಯರು, ಗರ್ಭಿಣಿಯರು, ಮಕ್ಕಳನ್ನು ಹೊರತುಪಡಿಸಿ ಆರೋಗ್ಯವಂತ ಮುಸ್ಲಿಮರಿಗೆ ರಮಜಾನ್ ತಿಂಗಳ ವ್ರತಾನುಷ್ಠಾನ ಕಡ್ಡಾಯ. ಹೀಗಿರುವಾಗ ಬೇಸಿಗೆ, ಮಳೆ, ಚಳಿ ಏನೇ ಇದ್ದರೂ ಧಾರ್ಮಿಕ ನೆಲೆಯಲ್ಲಿ ವ್ರತಾನುಷ್ಠಾನ ಮಾಡುತ್ತಾರೆ. ಆದರೆ ವೈದ್ಯರ ಸಲಹೆ ಪಾಲಿಸುವುದು ಉತ್ತಮ. ಮೊಹಮ್ಮದ್ ತ್ವಾಹಾ, ನಿಕಟಪೂರ್ವ ಕಾರ್ಯದರ್ಶಿ, ಉಳ್ಳಾಲ ದರ್ಗಾ