ರಾಜ್ಯದಲ್ಲಿ ತುಸು ದೀರ್ಘ ಅವಧಿವರೆಗೆ ಹೀಟ್​ವೇವ್​​​: ಬಹುತೇಕ ಜಿಲ್ಲೆಗಳಲ್ಲೂ ಅಧಿಕ ತಾಪಮಾನ

heat
Published on

ಬೆಂಗಳೂರು: ಈ ಬಾರಿ ಬೇಸಿಗೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಂದಾಜು 20-22 ದಿನಗಳ ಅವಧಿವರೆಗೆ ಉಷ್ಣ ಅಲೆ(ಹೀಟ್​ವೇವ್​) ಕಾಣಿಸಿಕೊಳ್ಳಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಿರುವ 2025ರ ಬೇಸಿಗೆ ಋತುಮಾನದ ವರದಿಯಲ್ಲಿ ಇದು ತಿಳಿದುಬಂದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತುಸು ದೀರ್ಘ ಅವಧಿವರೆಗೆ ಬಿಸಿಗಾಳಿ ಇರಲಿದೆ. ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿ.ಸೆ.ಉಷ್ಣಾಂಶ ದಾಖಲಾಗಲಿದೆ. ಪ್ರಸಕ್ತ ತಿಂಗಳಿಂದ ಮೇವರೆಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತು ಕರಾವಳಿಯ ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಲಿದೆ. ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ತಾಪಮಾನದಿಂದ ಗರಿಷ್ಠ ತಾಪಮಾನ ಉಂಟಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕನಿಷ್ಠ ತಾಪಮಾನದಲ್ಲಿಯೂ ವಾಡಿಕೆಗಿಂತ ಅಧಿಕ ಉಷ್ಣಾಂಶ ಕಾಣಿಸಿಕೊಳ್ಳಲಿದೆ. ಮೇನಲ್ಲಿ ಹಲವು ಜಿಲ್ಲೆಗಳಲ್ಲಿ 2ರಿಂದ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ. ಪ್ರಸಕ್ತ ತಿಂಗಳಲ್ಲಿ 5ರಿಂದ 8 ದಿನಗಳು ಉಷ್ಣ ಅಲೆ ಇರಲಿದೆ. ವಾಡಿಕೆಗಿಂತ ಅಧಿಕ ಮಳೆ ಸುರಿಯುವ ಸಂಭವ ಇದೆ ಎಂದು ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ಉತ್ತರ ಕರ್ನಾಟಕ ಕೊತ ಕೊತ: ವಿಜಯಪುರ, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ, ಕೊಪ್ಪಳ, ಬೀದರ್​, ಬೆಳಗಾವಿ, ರಾಯಚೂರು, ಗದಗ, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದ ಪೂರ್ತಿ ಜಿಲ್ಲೆಗಳು ಉಷ್ಣ ಅಲೆಗೆ ತತ್ತರಿಸಲಿವೆ. ಈ ಎಲ್ಲ ಜಿಲ್ಲೆಗಳಲ್ಲಿ 40 ಡಿ.ಸೆ.ಉಷ್ಣಾಂಶ ದಾಖಲಾಗಲಿದೆ. ರಾಜ್ಯದ ಶೇ.90 ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗಲಿವೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ಆರು ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಈ ಬಾರಿಯೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಲಿದೆ.

ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ: ಬಿಸಿಗಾಳಿ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಅತ್ಯಧಿಕ ತಾಪಮಾನದಿಂದ ವೃದ್ಧರು, ಮಕ್ಕಳು, ಆನಾರೋಗ್ಯ ಪೀಡಿತರ ಮೇಲೆ ಪರಿಣಾಮ ಬೀರಲಿದೆ. ಮುಖ್ಯವಾಗಿ ಶಾಖದೊತ್ತಡ, ರ್ನಿಜಲಿಕರಣ, ಆಯಾಸ ಕಂಡುಬರಲಿದೆ. ಮೂಲಸೌಕರ್ಯಗಳಾದ ವಿದ್ಯುತ್​ ಸರಬರಾಜು ಮತ್ತು ಸಾರಿಗೆ ವ್ಯವಸ್ಥೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಸವಾಲುಗಳನ್ನು ಎದುರಿಸಲು ಅಧಿಕಾರಿಗಳು ಪೂರ್ವಭಾವಿ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಇಲಾಖೆ ಸಲಹೆ ಕೊಟ್ಟಿದೆ. ಬಿಸಿಗಾಳಿ ಪರಿಸ್ಥಿತಿ ನಿರ್ವಹಣೆ ಕುರಿತು ಸಲಹೆ, ಸೂಚನೆ ನೀಡುವುದು, ಕಾರ್ಯತಂತ್ರ ರೂಪಿಸುವುದು, ಸಾರ್ವಜನಿಕರ ಆರೋಗ್ಯ ಕಾಪಾಡುವುದು ಮತ್ತು ಪ್ರತಿಕೂಲ ಪರಿಣಾಮ ಕಡಿಮೆ ಮಾಡಲು ಕ್ರಮಕೈಗೊಳ್ಳುವುದು ಅತ್ಯಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net