

ಬೆಂಗಳೂರು:ಕಳೆದ ವರ್ಷದಂತೆ ಈ ಬಾರಿಯೂ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 42 ಡಿ.ಸೆ. ಉಷ್ಣಾಂಶ ದಾಟುವ ನಿರೀಕ್ಷೆ ಇದೆ. ತೇವಾಂಶ ಕೊರತೆ, ಶುಭ್ರ ಆಕಾಶ,ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ 5-6 ಡಿ.ಸೆ.ಅಧಿಕ ಉಷ್ಣಾಂಶ ವರದಿಯಾಗಲಿದೆ. ಸಾಮಾನ್ಯವಾಗಿ ಮಾ.1ಕ್ಕೆ ಬೇಸಿಗೆಗಾಲ ಆರಂಭವಾಗಿ ಮೇ 31ರವರೆಗೆ ಇರುತ್ತದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ವಾಡಿಕೆಗಿಂತ ಮುನ್ನ ಅಂದರೆ ಪ್ರಸಕ್ತ ತಿಂಗಳ 2ನೇ ಅಥವಾ 3ನೇ ವಾರದಲ್ಲಿ ಬೇಸಿಗೆ ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ವರ್ಷದಿಂದ ವರ್ಷಕ್ಕೆ ನಗರದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಮಾರ್ಚ್ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಫೆಬ್ರವರಿಯಲ್ಲೇ ನಿಧಾನವಾಗಿ ಬಿಸಿಲು ಧಗೆ ಹೆಚ್ಚಳವಾಗುತ್ತಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಬೆಳಗ್ಗೆ 8 ಗಂಟೆಯಿಂದಲೇ ನೆತ್ತಿ ಸುಡಲಾರಂಭಿಸಿದೆ. ಅಲ್ಲದೆ, ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲಿ ಅಧಿಕವಾಗಿ ದಾಖಲಾಗುವ ಸಂಭವ ಇದೆ. ಅಲ್ಲದೆ, ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ಈ ಬಾರಿಯೂ ಅಂಥದ್ದೇ ವಾತಾವರಣ ಇರುವ ಜತೆಗೆ ಬಿಸಿಗಾಳಿ ಬೀಸಲಿದೆ.
ಸಾರ್ವಜನಿಕರೇ ಎಚ್ಚರ
ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾದರೆ ಜನರಿಗೆ ಊತ, ತಲೆನೋವು, ವಾಕರಿಕೆ, ರ್ನಿಜಲೀಕರಣ, ಸುಸ್ತು, ವಾಂತಿ, ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆ ಕಾಡಲಿವೆ. ಜ್ವರ (102 ಡಿಗ್ರಿ) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ (104 ಡಿಗ್ರಿ) ಬಂದರೆ ಪ್ರಜ್ಞೆ ಬೀಳುವ ಅಪಾಯ ಜತೆಗೆ ಕೋಮಾಕ್ಕೂ ಹೋಗಬಹುದು. ಹಾಗಾಗಿ, ಜನರು ಎಚ್ಚರವಹಿಸುವುದು ಅಗತ್ಯ.
ತಾಪಮಾನ ಹೆಚ್ಚಳಕ್ಕೆ ಕಾರಣವೇನು?
* ಮಣ್ಣಿನಲ್ಲಿ ತೇವಾಂಶ ಕೊರತೆ
* ಕೆರೆ, ಗುಂಟೆಗಳಲ್ಲಿ ನೀರು ಬರಿದಾಗುವುದು
* ತೇವಾಂಶಭರಿತ ಮೋಡ ಇಲ್ಲದಿರುವುದು
* ಅರಣ್ಯ ನಾಶ
* ಪಳೆಯುಳಿಕೆ ಇಂಧನ ಸುಡುವುದು
* ತಗ್ಗದ ಎಲ್&ನಿನೋ ಪ್ರಭಾವ
* ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ
ಯಾರ್ಯಾರು ಎಚ್ಚರವಹಿಸಬೇಕು
* ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು
* ಆಟೋ ಚಾಲಕರು, ಸಂಚಾರ ಪೊಲೀಸರು
* ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ಮಿಕರು
* ಬಿಸಿಲಿನ ಪ್ರಖರತೆ ಇದ್ದಾಗ ವಯಸ್ಸಾದವರು ಹೊರಗಡೆ ಓಡಾಡಬಾರದು
* ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡಬಾರದು
* ಹೊರಗಡೆ ತೆರಳುವಾಗ ಛತ್ರಿ, ನೀರಿನ ಬಾಟಲ್ ತೆಗೆದುಕೊಂಡು ಹೋಗಬೇಕು
* ವಿಶೇಷವಾಗಿ ನಿರ್ಮಾಣ ಹಂತದ ಕಾಮಗಾರಿ ನಡೆಸಬಾರದು
ಎಚ್ಚರಿಕೆ ಕ್ರಮಗಳೇನು?
*ಹೆಚ್ಚು ನೀರು (ಕುದಿಸಿ ಆರಿಸಿದ) ಕುಡಿಯಬೇಕು
* ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ ಉತ್ತಮ
* ತಾಜಾ ಹಣ್ಣು, ತರಕಾರಿ ಬಳಸಿ
* ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಿ
* ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ
* ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರಿ
* ಮದ್ಯಪಾನ, ಧೂಮಪಾನ ಒಳ್ಳೆಯದಲ್ಲ
* ಸುಡು ಬಿಸಿಲಿನಲ್ಲಿ ಓಡಾಡಬಾರದು
* ಹೊರಗೆ ಹೋದಲ್ಲಿ ಛತ್ರಿ, ಕೂಲಿಂಗ್ ಗ್ಲಾಸ್, ಹ್ಯಾಟ್ ಧರಿಸಿ
* ಚರ್ಮದ ರಕ್ಷಣೆಗೆ ಹತ್ತಿ ಉಡುಪು ಧರಿಸಿ, ಸನ್ಸ್ಕ್ರೀನ್ ಲೋಷನ್ ಬಳಸಿ
* ಧೂಳು ಮತ್ತು ಬಿಸಿಲಿನಿಂದ ಕಣ್ಣಿನ ಆರೋಗ್ಯ ರಕ್ಷಣೆಗಾಗಿ ಕೂಲಿಂಗ್ ಗ್ಲಾಸ್ ಧರಿಸಬೇಕು
* ಬೆಚ್ಚಗಿನ/ತಣ್ಣೀರಿನ ಸ್ನಾನ ಒಳ್ಳೆಯದು
ಉಷ್ಣಾಂಶ ದಾಖಲಾದ ವಿವರ
ವರ್ಷ ತಾಪಮಾನ
2024 41.3
2022 39.7
2021 38.9
2019 39.9
2018 38.1
2017 39.6
ಸದ್ಯ ಸಿಲಿಕಾನ್ ಸಿಟಿಯಲ್ಲಿ ವಾಡಿಕೆಯಂತೆ 1-2 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಶುಕ್ರವಾರ ಗರಿಷ್ಠ ತಾಪಮಾನದಲ್ಲಿ 31 ಡಿ.ಸೆ. ವರದಿಯಾಗಿದೆ. ಈ ಬಾರಿಯೂ 40 ಡಿ.ಸೆ. ತಾಪಮಾನ ದಾಟುವ ಸಾಧ್ಯತೆ ಇದೆ. ಶಾಖದ ಅಲೆಯ ಜತೆಗೆ ಬಿಸಿಗಾಳಿಯೂ ಬೀಸಲಿದೆ.
| ಸಿ.ಎಸ್. ಪಾಟೀಲ್. ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.