ನಿವೇಶನ ಕೊಡಿಸುವುದಾಗಿ ವಂಚನೆ; ಮಾಜಿ ಡಿವೈಎಸ್ಪಿ ಬಂಧನ

crime
Published on

ಮೈಸೂರು: ನಿವೇಶನ ಕೊಡಿಸುವುದಾಗಿ ನಂಬಿಸಿ 12 ಲಕ್ಷ ರೂ.ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ನಿವೃತ್ತ ಡಿವೈಎಸ್ಪಿ ವಿಜಯ್ ಕುಮಾರ್ ಅವರನ್ನು ಲಕ್ಷ್ಮೀಪುರಂನ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬೋಗಾದಿ ನಿವಾಸಿ ವೆಂಕಟರಾಜು ಅವರಿಗೆ ನಿವೇಶನ ಕೊಡಿಸುವ ಭರವಸೆ ನೀಡಿ ವಿಜಯ್ ಕುಮಾರ್ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಸೋಮಸುಂದರ್ ಹಣ ಪಡೆದು ವಂಚನೆ ಮಾಡಿದ್ದರು. ಹಣ ಹಿಂತಿರುಗಿಸುವಂತೆ ಕೇಳಿಕೊಂಡಾಗ ಕೊಲೆ ಬೆದರಿಕೆ ಯೊಡ್ಡಿದರು.

ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿದ ಸೋಮಸುಂದರ್ ಆನಂದನಗರ ಬಡಾವಣೆಗೆ ವೆಂಕಟರಾಜು ಅವರನ್ನು ಕರೆದೊಯ್ದು ಯಾರದೋ ನಿವೇಶನದ ಮುಂದೆ ನಿಲ್ಲಿಸಿ ಫೋಟೋ ತೆಗೆದು ಮುಡಾದಲ್ಲಿ ನಿವೇಶನ ಮಂಜೂರಾಗಿದೆ ಎಂದು ನಂಬಿಸಿದ್ದರು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನ ನೋಂದಣಿ ಮಾಡಿಸಿಕೊಡುವಂತೆ ಮನವಿ ಮಾಡಿದ ಸಂದರ್ಭ ಇಲ್ಲದ ಸಬೂಬು ಹೇಳಿ ದಿನ ದೂಡಿದರು. ನಗರ ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಕಟ್ಟಿದ, ಮುಡಾದಲ್ಲಿ ತೆರಿಗೆ ಹಣ ಪಾವತಿಸಿದ ನಕಲಿ ರಶೀತಿಗಳನ್ನು ಸೋಮಸುಂದರ್ ಸೃಷ್ಟಿಸಿ ನಂಬಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದರು.

ಇವರ ವರ್ತನೆಯಿಂದ ಅನುಮಾನಗೊಂಢ ಸೋಮಸುಂದರ್ ನಗರ ಪಾಲಿಕೆ ಹಾಗೂ ಮುಡಾ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಅವರಿಗೆ ನೀಡಿದ ಎಲ್ಲ ದಾಖಲೆಗಳು ನಕಲಿ ಎಂಬುದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಸೋಮವಾರ ಸೋಮಸುಂದರ್ ಹಾಗೂ ವಿಜಯಕುಮಾರ್ ವಿರುದ್ಧ ದೂರು ನೀಡಿದರು. ದೂರು ದಾಖಲಾಗುತ್ತಿದ್ದಂತೆ ಸೋಮಸುಂದರ್ ಅವರನ್ನು ಪೊಲೀಸರು ಬಂಧಿಸಿದ್ದರು, ವಿಜಯ ಕುಮಾರ್ ತಲೆಮರೆಸಿಕೊಂಡಿದ್ದರು. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net