ಕಟ್ಟಡಗಳ ಕಿಷ್ಕಿಂಧೆಯಿಂದ ಶಾಖ ಹೆಚ್ಚಳ: ನಗರ ಕಾಂಕ್ರೀಟ್‌ಮಯವಾಗುತ್ತಿರುವ ಬಗ್ಗೆ ಐಐಎಸ್ಸಿ ವಿಜ್ಞಾನಿಗಳ ಎಚ್ಚರಿಕೆ

city building
Published on

ಬೆಂಗಳೂರು: ರಾಜಧಾನಿ ಬೆಂಗಳೂರು ಯದ್ವಾತದ್ವ ಬೆಳೆವಣಿಗೆಗೆ ಸಿಲುಕಿ ಮೂಲಸೌಕರ್ಯ ಸಮಸ್ಯೆಯಿಂದ ಬಳಲುತ್ತಿದೆ. ಜತೆಗೆ ಅಭಿವೃದ್ಧಿ ಕಾರ್ಯದಿಂದಲೂ ಕೆಲ ಸಮಸ್ಯೆಯನ್ನು ತಂದೊಡ್ಡಿದೆ. ಇವುಗಳ ಸಾಲಿಗೆ ನಗರವು ಮಿತಿಗಿಂತ ಹೆಚ್ಚು ಕಟ್ಟಡಗಳನ್ನು ಹೊಂದುತ್ತಿರುವುದರಿಂದ ಉಸಿರಾಟದ ತೊಂದರೆ ಹಾಗೂ ಶಾಖ ಹೆಚ್ಚಳದ ಗೂಡಾಗಿ ಪರಿವರ್ತಿತವಾಗುತ್ತಿದೆ ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ನಗರದ ಐಐಎಸ್ಸಿ ವಿಜ್ಞಾನಿಗಳು ಹಾಗೂ ಇತರ ಸಮಾನಮನಸ್ಕ ಸಂಸ್ಥೆಗಳು ಒಟ್ಟಾಗಿ ನಡೆಸಿರುವ ಅಧ್ಯಯನದಲ್ಲಿ ಮಹಾನಗರವು ಶಾಖ ಹೆಚ್ಚಳದ ಶಾಕ್‌ಗೆ ಒಳಗಾಗಿರುವುದನ್ನು ದೃಢಪಡಿಸಿದೆ. ಅಂತರ್ಜಲ ಕ್ಷೀಣ, ಜಲಮೂಲಗಳ ವಿಸ್ತೀರ್ಣ ಕಡಿತ, ಹಸಿರು ಕಣ್ಮರೆ, ವಿವಿಧ ರೀತಿಯ ಮಾಲಿನ್ಯ ಹಾಗೂ ರಸ್ತೆ ಸೇರಿ ಕಾಂಕ್ರೀಟ್ ಕಟ್ಟಡಗಳನ್ನು ಮಿತಿಮೀರಿ ನಿರ್ಮಿಸುತ್ತಿರುವುದೇ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗಿದೆ ಎಂದು ಬೊಟ್ಟು ಮಾಡಲಾಗಿದೆ.

ಭೂ ಬಳಕೆ ನಿಯಮವನ್ನು ಉಲ್ಲಂಘಿಸಿ ಮಿತಿಗಿಂತ ಅತ್ಯಧಿಕ ಪ್ರಮಾಣದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟೀಕರಣ, ಇನ್ನಿತರ ಮೂಲಸೌಕರ್ಯ ಒದಗಿಸಲು ಅಸಂಖ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ನಗರವು ಶಾಖದ ಬಲೆಗೆ ಬಿದ್ದಿದೆ. ಬೇಸಿಗೆ ಅಲ್ಲದೆ ಇತರ ಋತುಗಳ ಸಮಯದಲ್ಲೂ ಶಾಖದ ತೀವ್ರತೆ ಇಲ್ಲಿನ ಜನರ ಜೀವನವನ್ನು ದುರ್ಬರಗೊಳಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸುಸ್ಥಿರ ಅಭಿವೃದ್ಧಿಗೆ ಮಣೆ ಹಾಕುವ ಜತೆಗೆ ಇನ್ನಿತರ ಪರಿಹಾರೋಪಾಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ತೀವ್ರಗೊಂಡು ವಾಸಯೋಗ ನಗರವಾಗಿ ಉಳಿಯಲು ಬೆಂಗಳೂರು ಪರದಾಡುವ ಸ್ಥಿತಿಗೆ ತಲಪಲೂಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.

ನಗರದೊಳಗೆ ಶಾಖದ ಪ್ರಖರತೆ ಹೆಚ್ಚು:

ಪ್ರಸ್ತುತ ಮಹಾನಗರದ ಒಳ ಭಾಗದಲ್ಲಿ ಕಿಷ್ಕಿಂಧೆಯ ವಾತಾವರಣ ಕಂಡುಬರುತ್ತಿದ್ದು, ಭೂ ಬಳಕೆ ಶೇ.92 ದಾಟಿದೆ. ಇದರಿಂದ ಹಸಿರು ಮಾಯವಾಗಿ ಕಟ್ಟಡಮಯವಾಗಿದೆ. ಈ ಬೆಳವಣಿಗೆಯಿಂದಾಗಿ ಈ ಪ್ರದೇಶದಲ್ಲಿ ಬಿಸಿಲ ತಾಪ ಹೆಚ್ಚಿದೆ. ಜತೆಗೆ ರಾತ್ರಿ ವೇಳೆಯೂ ಶಾಖದ ಪ್ರಖರತೆ ಪೂರ್ಣವಾಗಿ ತಗ್ಗದೆ ಮನುಷ್ಯರ ಬದುಕಿನ ಮೇಲೆ ಪರಿಣಾಮ ಬೀರಿದೆ. ನಗರ ಜಿಲ್ಲೆಯ ಗಡಿ ಭಾಗದಲ್ಲಿ ಸ್ವಲ್ಪ ಹಸಿರು ಹಾಗೂ ಉಸಿರಾಡುವಂತಹ ವಾತಾವರಣ ಕಂಡುಬಂದರೂ, ನಗರದ ಮಧ್ಯೆ ತದ್ವಿರುದ್ಧ ಪರಿಸ್ಥಿತಿ ಇದೆ. 1973ರಲ್ಲಿ ಬೆಂಗಳೂರು ನಗರದಲ್ಲಿ ಶೇ.68.2 ಭಾಗ ಹಸಿರು ತುಂಬಿತ್ತು. ಆಗ ಭೂ ಬಳಕೆ ಪ್ರಮಾಣ ಶೇ.7.97ರಷ್ಟಿತ್ತು. 2002ರ ವೇಳೆ ಈ ಪ್ರಮಾಣ ಕ್ರಮವಾಗಿ 38.7 ಹಾಗೂ 37.7 ಪ್ರಮಾಣದಲ್ಲಿತ್ತು. 2025ರ ವೇಳೆಗೆ ಭೂ ಬಳಕೆ 87.6ಕ್ಕೆ ಏರಿದ್ದು, ಹಸಿರು ಪ್ರದೇಶ ಶೇ.2ಕ್ಕೆ ಕುಸಿತ ಕಂಡು ಆತಂಕ ಸೃಷ್ಟಿಸಿದೆ.

ನಗರೀಕರಣದ ಬೆಳವಣಿಗೆ ಶೇಕಡವಾರು:

ವರ್ಷ ಹಸಿರು ಭೂ ಬಳಕೆ

1973 68.2 7.97

1992 46.2 27.3

1999 45.7 35.4

2002 38.7 37.7

2008 28.2 49.5

2014 8.4 65.4

2019 5.98 81.04

2021 3.0 85.5

2023 2.9 86.6

2025 2.0 87.6

ಶಾಖ ಹೆಚ್ಚಳಕ್ಕೆ ಕಾರಣಗಳಿವು:

* ಭೂ ಬಳಕೆಯನ್ನು ಮಿತಿ ಮೀರಿ ಬಳಸಿರುವುದು

* ರಸ್ತೆಗಳಿಗೆ ಕಾಂಕ್ರೀಟ್, ಕಟ್ಟಡಗಳ ನಿರ್ಮಾಣ ಏರಿಕೆ

* ಮುಕ್ತಜಾಗ, ಪಾರ್ಕ್/ಆಟದ ಮೈದಾನಕ್ಕೆ ಜಾಗ ಬಿಡದಿರುವುದು

* ಹಸಿರು ಪ್ರದೇಶದಲ್ಲಿ ವಸತಿ, ವಾಣಿಜ್ಯ ಚಟುವಟಿಕೆಗೆ ಬಳಕೆ

* ಕೆರೆ ಸೇರಿ ಜಲಮೂಲಗಳ ಒತ್ತುವರಿ, ಅಭಿವೃದ್ಧಿಗೆ ನಿರ್ಲಕ್ಷ್ಯ

ಪರಿಹಾರೋಪಾಯ ಹೇಗೆ, ಏಕೆ?:

* ಪರಿಸರಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವುದು

* ನಿವೇಶನದಲ್ಲಿ ಶೇ.30 ಜಾಗ ಹಸಿರು/ಓಪನ್ ಸ್ಪೇಸ್ ಆಗಿ ಬಳಕೆ

* ಬಿಲ್ಡಿಂಗ್ ಆವರಣದ ರಸ್ತೆ, ಫುಟ್‌ಪಾತ್‌ಗೆ ಕಾಂಕ್ರೀಟ್ ಹಾಕದಂತೆ ಎಚ್ಚರ

* ಹಸಿರು ರಸ್ತೆ, ಗ್ರೀನ್ ಕಾರಿಡಾರ್‌ಗಳ ಅಭಿವೃದ್ಧಿಗೆ ಆದ್ಯತೆ

* ಕೆರೆಗಳ ಅಭಿವೃದ್ಧಿ, ಗಿಡ ನೆಡುವಿಕೆಗೆ ವಿಶೇಷ ಗಮನ ನೀಡುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net