ಶಿಕ್ಷಕ ಗುಂಡಪಲ್ಲಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Teacher Gundapalli
Published on

ಹಾನಗಲ್ಲ: ಶಿಕ್ಷಕ ವೃತ್ತಿಯನ್ನು ನೌಕರಿಯೆಂದು ಮಾಡಲಿಲ್ಲ. ಸೇವೆಯಾಗಿ ಪಾಲಿಸಿದರು. ಹೀಗಾಗಿ ನಿವೃತ್ತಿಯಾದ ಈ ಶಿಕ್ಷಕನನ್ನು ಊರವರೆಲ್ಲ ತೆರೆದ ವಾಹನದಲ್ಲಿ ಗೌರವಪೂರ್ವಕ ಮೆರವಣಿಗೆ ಮಾಡಿ, ಸನ್ಮಾನಿಸಿ, ವಿದ್ಯಾರ್ಥಿಗಳು ಕಣ್ಣೀರಿಟ್ಟು ಗುರುಗಳನ್ನು ಬೀಳ್ಕೊಟ್ಟ ಹೃದಯಸ್ಪರ್ಶಿ ಸಮಾರಂಭಕ್ಕೆ ತಾಲೂಕಿನ ಶ್ಯಾಡಗುಪ್ಪಿ ಸಾಕ್ಷಿಯಾಯಿತು.

ಶನಿವಾರ ತಾಲೂಕಿನ ಶ್ಯಾಡಗುಪ್ಪಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಗುಂಡಪಲ್ಲಿ ಅವರ ಅಪರೂಪದ ಸೇವೆಗೆ ಸಂದ ಗೌರವ ಇದಾಗಿತ್ತು.

ನಿವೃತ್ತ ಡಿಡಿಪಿಐ ಎಸ್.ಬಿ. ಕೊಡ್ಲಿ ಮಾತನಾಡಿ, ಗುಂಡಪಲ್ಲಿ ಗುರುಗಳು ಅಪರೂಪರಲ್ಲಿ ಅಪರೂಪರು. ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆಯಾಗಿ, ಇಡೀ ಶಿಕ್ಷಕ ವೃತ್ತಿಗೆ ಮಾದರಿಯಾದ ಹಿರಿಮೆ ಅವರದು. ನಾವು ಕಂಡ ಮೇರು ವ್ಯಕ್ತಿತ್ವದ ಶಿಕ್ಷಕರಾಗಿದ್ದಾರೆ ಎಂದರು.

ಹಾವೇರಿ ಡಿಡಿಪಿಐ ಸುರೇಶ ಹುಗ್ಗಿ ಮಾತನಾಡಿ, ಸಮಾಜ ಸೇವೆ ಮಾಡಿದವರಿಗೆ ಸಮಾಜ ಗೌರವಿಸುತ್ತದೆ ಎಂಬುದಕ್ಕೆ ಎಂ.ಎಸ್. ಗುಂಡಪಲ್ಲಿ ಸಾಕ್ಷಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಜಡೆ ಸಂಸ್ಥಾನ ಮಠದ ಜಗದ್ಗುರು ಕುಮಾರಕೆಂಪಿನ ಸಿದ್ಧವೃಷಬೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.

ಗೌರವ ಸ್ವೀಕರಿಸಿ ಮಾತನಾಡಿದ ಎಂ.ಎಸ್. ಗುಂಡಪಲ್ಲಿ ಅವರು, ಮಾನವ ಜನ್ಮ ಸಾರ್ಥಕ್ಯ ಕಾಣುವುದೇ ಸೇವೆಯಲ್ಲಿ. ಭಗವಂತ ಕೊಟ್ಟ ಈ ಜೀವನ ಶಿಕ್ಷಕನಾಗಿ ಶಾಲಾ ಮಕ್ಕಳ ಉನ್ನತಿಗೆ ಶ್ರಮಿಸುವುದಕ್ಕೆ ಆಗಿದೆ. ಅದನ್ನು ಪ್ರಾಂಜಲ ಮನಸ್ಸಿನಿಂದ ಪೂರೈಸಿದ್ದೇನೆ ಎಂಬ ಸಮಾಧಾನವಿದೆ ಎಂದರು.

ಹೀರೂರಿನ ನಂಜುಂಡಪಂಡಿತಾರಾಧ್ಯ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಚಾಕ್ಷರಿ ಪಡೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಶಾಂತಮ್ಮ ಗುಂಡಪಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ. ಸಾಲಿಮಠ (ಹಾನಗಲ್ಲ ), ಎಂ.ಬಿ. ಅಂಬಿಗೇರ (ಶಿಗ್ಗಾಂವ), ಎಸ್.ಜಿ. ಕೋಟಿ (ಬ್ಯಾಡಗಿ), ಎಸ್.ಎಸ್. ಅಡಿಗ (ರಾಣೆಬೆನ್ನೂರ), ಹಾವೇರಿ ಡಯಟ್ ಉಪನ್ಯಾಸಕ ಎಂ.ಎಚ್. ಪಾಟೀಲ, ಗ್ರಾಪಂ ಸದಸ್ಯರಾದ ಶ್ರೀಧರ ಮಲಗುಂದ, ಲಿಂಗರಾಜ ಪಡೆಪ್ಪನವರ, ಮಲ್ಲಿಕಾರ್ಜುನ ಬಾಳೂರ ಮುಖ್ಯೋಪಾಧ್ಯಾಯ ಜಿ.ಜಿ. ಗೋರನವರ, ಸಿಆರ್‌ಪಿ ಮುರುಗೇಶ ಬಾಳೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಿವಲಿಂಗಯ್ಯ ಕರಿಬಸಯ್ಯವರ ಸ್ವಾಗತಿಸಿದರು. ಸಿ.ನಾಗರಾಜ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net