ಪ್ರವೀಣ್ ಪತ್ನಿಗೆ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ

kulai
Published on

ಮಂಗಳೂರು: ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಲಿ, ಪ್ರವೀಣ್ ನೆಟ್ಟಾರು ಪತ್ನಿಗೆ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲು ಪ್ರಯತ್ನ ಮಾಡುವುದಾಗಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.


ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಬಿಲ್ಲವ ಸಮಾಜದವರು. ಅವರ ಪತ್ನಿಗೆ ನೌಕರಿ ಕೊಡುವುದು ದೊಡ್ಡ ಕೆಲಸವೇನೂ ಅಲ್ಲ, ಆದರೆ ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ. ಖಾಯಂ ಕೆಲಸ ಕೊಡಿಸಲಾಗದ ಜಿಲ್ಲೆಯ ಸಂಸದ ನಾಚಿಕೆ ಪಡಬೇಕಾದ ವಿಷಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.


ಬಿಜೆಪಿ ಸರ್ಕಾರ ನೀಡಿದ್ದ ತಾತ್ಕಾಲಿಕ ನೆಲೆಯ ಗುತ್ತಿಗೆ ಆಧಾರದ ಕೆಲಸವನ್ನು ಬಿಲ್ಲವ ಸಮಾಜ ಖಂಡಿತಾ ಒಪ್ಪುವುದಿಲ್ಲ ಎಂದರು.
ಹಿಂದು ಸಂಘಟನೆಯ ಬಿಲ್ಲವ ಯುವಕರನ್ನು ಬಿಜೆಪಿ ನಾಯಕರು ತಮಗೆ ಬೇಕಾದಂತೆ ಬಳಸಿ ಕೊನೆಗೆ ಕೈ ಬಿಡುತ್ತಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೆಟ್ಟಾರು ಪತ್ನಿಗೆ ಉದ್ಯೋಗ ಕೊಡಲು ನಾವೆಲ್ಲರೂ ಒಂದಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದರು.


ರಾಜ್ಯ ಹಿಂದುಳಿದ ವರ್ಗ ಉಪಾಧ್ಯಕ್ಷ ಗಣೇಶ್ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆನಂದ ಅಮೀನ್, ದಕ್ಷಿಣ ಕನ್ನಡ ಹಿಂದುಳಿದ ವರ್ಗದ ಉಪಾಧ್ಯಕ್ಷ ಬಿ.ಕೆ. ತಾರಾನಾಥ್, ಸುರತ್ಕಲ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net