ಡಾ.ಪಿ.ಕೃಷ್ಣಯ್ಯ ದಂಪತಿಗೆ ಆತ್ಮೀಯವಾಗಿ ಸನ್ಮಾನ

8
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ದೈಹಿಕ ಶಿಕ್ಷಣ ನಿರ್ದೇಶಕರ ಮತ್ತು ಕ್ರೀಡಾಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಡಾ.ಪಿ.ಕೃಷ್ಣಯ್ಯ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪ್ರೊ.ಎಂ.ಚಂದ್ರಕುಮಾರ್, ಎನ್.ಎಸ್.ಸುಬ್ರಹ್ಮಣ್ಯ, ಡಾ.ಸಿ.ವೆಂಕಟೇಶ್, ಡಾ.ಎಚ್.ವಿ.ಉದಯಕುಮಾರ್ ಇತರರಿದ್ದರು.
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕರಾಗಿ ಸೋಮವಾರ ನಿವೃತ್ತ ಹೊಂದಿದ ಡಾ.ಪಿ.ಕೃಷ್ಣಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ, ದೈಹಿಕ ಶಿಕ್ಷಣ ನಿರ್ದೇಶಕರ ಮತ್ತು ಕ್ರೀಡಾಭಿಮಾನಿಗಳ ಬಳಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್‌ನ ಯೋಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮೈಸೂರು ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಚಂದ್ರಕುಮಾರ್ ಮಾತನಾಡಿ, ಕೃಷ್ಣಯ್ಯ ಅವರು ತಳ ಸಮುದಾಯದಲ್ಲಿ ಹುಟ್ಟಿ, ಬಡತನದ ಬೇಗೆಯಲ್ಲಿ ಬೆಳೆದು ಬಂದ ಪ್ರಾಮಾಣಿಕ ವ್ಯಕ್ತಿ. ಅವರೊಬ್ಬ ಸಂಘ ಜೀವಿ, ಸ್ನೇಹ ಜೀವಿಯಾಗಿದ್ದಾರೆ. ಮಾನವತವಾದದಲ್ಲಿ ನಿಷ್ಠೆ ಹೊಂದಿದ್ದಾರೆ. ಅವರು ಕೆಲಸಕ್ಕೆ ಸೇರಿ ಇದೀಗ ನಿವೃತ್ತಿ ಹೊಂದುವಾಗಲೂ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ ಎಂದರು.

ಕೃಷ್ಣಯ್ಯ ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕರಾಗಿದ್ದ ವೇಳೆ ಉತ್ತಮ ಕೆಲಸ ಮಾಡಿದ್ದಾರೆ. ಕ್ರೀಡೆಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ ಎಂದರು.

ಸೋಮಾನಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಎನ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸರಳತೆ, ಸಜ್ಜನತೆ, ಹೃದಯವಂತಿಗೆ ಮತ್ತೊಂದು ಹೆಸರು ಡಾ.ಪಿ.ಕೃಷ್ಣಯ್ಯ. ಅವರ ಜತೆ 40 ವರ್ಷದ ಒಡನಾಟ ಹೊಂದಿದ್ದೇನೆ. ಅವರ ವ್ಯಕ್ತಿತ್ವ ಏನು ಎಂದು ಕ್ರೀಡಾ ಜಗತ್ತಿಗೆ ಗೊತ್ತಿದೆ ಎಂದರು.

ಪಿ.ಕೃಷ್ಣಯ್ಯ ಅವರ ಪತ್ನಿ ಇಂದಿರಾದೇವಿ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಸಿ.ವೆಂಕಟೇಶ್, ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net