

ಮೈಸೂರು: ನಗರದ ಜಯದೇವ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಮೆಟ್ರಾನಿಕ್ ಸೆಲ್ಫ್ ಎಕ್ಸ್‌ಪೆಂಡಿಂಗ್ ಅಯೋರ್ಟಿಕ್ ಕವಾಟವನ್ನು (ಟಿಎವಿಐ) ಶಸ್ತ್ರಚಿಕಿತ್ಸೆ ಇಲ್ಲದೆ ಯಶಸ್ವಿಯಾಗಿ ರೋಗಿಯೊಬ್ಬರಿಗೆ ಹೃದಯಕ್ಕೆ ಅಳವಡಿಸಲಾಗಿದೆ.
ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ್ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲದ 81 ವರ್ಷದ ನಿವೃತ್ತ ಉಪನ್ಯಾಸಕ ಚನ್ನಮಾದೇಗೌಡ ಅವರಿಗೆ ಡಾ.ಬಿ.ದಿನೇಶ್, ಡಾ.ಪ್ರಶಾಂತ್ ದ್ವಿವೇದಿ ನೇತೃತ್ವದ ತಂಡ ಯಶಸ್ವಿಯಾಗಿ ಅಯೋರ್ಟಿಕ್ ಕವಾಟವನ್ನು ಅಳವಡಿಸಿದೆ.
ಸಾಮಾನ್ಯವಾಗಿ ಈ ಸಮಸ್ಯೆಗೆ ತೆರೆದ ಹೃದಯ ಚಿಕಿತ್ಸೆ ಮಾಡುತ್ತೇವೆ. ಆದರೆ ವಯಸ್ಸಾದವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗದವರಿಗೆ ತೊಡೆಯ ರಕ್ತನಾಳದ ಮೂಲಕ ಅಯೋರ್ಟಿಕ್ ಕವಾಟವನ್ನು ಹೃದಯಕ್ಕೆ ಜೋಡಿಸಲಾಗುತ್ತದೆ. ಈ ಚಿಕಿತ್ಸೆಗೆ 16 ಲಕ್ಷ ರೂ. ವೆಚ್ಚವಾಗುತ್ತದೆ ಇದರಲ್ಲಿ 1 ಲಕ್ಷ ರೂ. ರಿಯಾಯಿತಿ ನೀಡಲಾಗಿದೆ ಎಂದು ಡಾ.ಸದಾನಂದ್ ತಿಳಿಸಿದರು.
ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ.ಬಿ.ದಿನೇಶ್ ಮಾತನಾಡಿ, ಈ ಶಸ್ತ್ರಚಿಕಿತ್ಸೆಯಿಂದ ಎದೆಯ ಮೇಲೆ ಯಾವುದೇ ತರಹದ ಗಾಯಗಳಾಗುವುದಿಲ್ಲ. ಶಸ್ತ್ರಚಿಕಿತ್ಸೆ ಆದ ಮೂರೇ ದಿನದಲ್ಲಿ ಸಾಮಾನ್ಯರಂತೆ ಓಡಾಡುಬಹುದು. ಈ ಚಿಕಿತ್ಸೆ ರೋಗಿಗಳಿಗೆ ವರದಾನವಾಗಿದೆ. ಇನ್ಶೂರೆನ್ಸ್, ಇಎಸ್‌ಐ, ಸಿಜಿಎಚ್‌ಎಸ್ ಲಭ್ಯವಿರುವ ರೋಗಿಗಳು ಇದರ ಅನುಕೂಲ ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಚಿಕಿತ್ಸೆಯ ತಂಡದಲ್ಲಿ ಡಾ.ವೈ.ಎಸ್.ಶ್ರೀಮಂತ್, ಡಾ.ಜೆ.ಸ್ನೇಹಲ್, ಡಾ.ಭಾರತಿ, ಡಾ.ನಿಶ್ಚಿತ್, ಡಾ.ಮಧುಪ್ರಕಾಶ್, ಡಾ.ಚಂದನ್, ಡಾ.ಮಿಥುನ್, ಟೆಕ್ನಿಷಿಯನ್‌ಗಳಾದ ನಾಗರಾಜ್, ಸುಮಾ, ಶಾಂತಕುಮಾರಿ, ಹಿರಿಯ ಶುಶ್ರೂಷಕ ಅಧಿಕಾರಿ ಹರೀಶ್‌ಕುಮಾರ್ ಇತರರು ಇದ್ದರು.