

ಮಂಜುನಾಥ ತಿಮ್ಮಯ್ಯ ಮೈಸೂರು
ಕರುನಾಡಿನ ಸಾಂಸ್ಕೃತಿಕ ಸಿರಿ, ಪರಂಪರೆಯ ಐಸಿರಿಯ ಪ್ರತೀಕವಾಗಿರುವ ವಿಶ್ವ ಪ್ರಸಿದ್ಧ ಮೈಸೂರು ಜಂಬೂಸವಾರಿ ಮೆರವಣಿಗೆಯ ವೈಭೋಗ ಸಹಸ್ರಾರು ಜನಸ್ತೋಮದ ಹೃದಯ ರ್ಸ³ಸಿತು..!
ನೆತ್ತಿ ಸುಡುವ ಸೂರ್ಯನ ಪ್ರಖರತೆ, ಮಳೆಯ ಸಿಂಚನದ ನಡುವೆಯೂ ವಿಜಯದಶಮಿ ಮೆರವಣಿಗೆ ಸಾಂಗವಾಗಿ ನೆರವೇರುವ ಮೂಲಕ ನಾಡಹಬ್ಬ ದಸರೆ ಶನಿವಾರ ಸಂಪನ್ನಗೊಂಡಿತು. 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಮೂರ್ತಿಯನ್ನು ಸತತ 5ನೇ ಬಾರಿಗೆ ಹೊತ್ತು ರಾಜಬೀದಿಯಲ್ಲಿ ಸಾಗಿದ ಗಜನಾಯಕ ಅಭಿಮನ್ಯು ಎಂದಿನಂತೆ ಕಣ್ಣು ಕೋರೈಸಿದ. ಅಧಿದೇವತೆಯನ್ನು ಕಂಡ ಸಾವಿರಾರು ಜನ, ಭಕ್ತಿ-ಭಾವ ಪರವಶರಾಗಿ ಧನ್ಯತೆ ಮೆರೆದರು.
ದೇವಿಗೆ ಸಿಎಂ ಪುಷ್ಪನಮನ: ಅರಮನೆ ಅಂಗಳ ತುಂಬಿಕೊಂಡಿದ್ದ ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳು ಬಲರಾಮ ದ್ವಾರದ ಮೂಲಕ ರಾಜಮಾರ್ಗದತ್ತ ಸಾಗುತ್ತಿದ್ದಂತೆಯೇ ವೇದಿಕೆಯ ಮುಂಭಾಗಕ್ಕೆ ಅಭಿಮನ್ಯು ಆಗಮನವಾಯಿತು. ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 5.02ರ ಹೊತ್ತಿನಲ್ಲಿ ಪುಷ್ಪನಮನ ಸಲ್ಲಿಸಿದರು. ಸಿಎಂ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಜಿಲ್ಲಾಧಿಕಾರಿ ಜೆ.ಲಕ್ಷ್ಮೀಕಾಂತ್ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಕೂಡ ಪುಷ್ಪ ಸಮರ್ಪಿಸಿದರು. ಮನೆಯಲ್ಲಿ ಮಗು ಜನಿಸಿದ ಸೂತಕದ ಕಾರಣಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೈರಾಗಿದ್ದರು. ಮೇಯರ್ ಸಹ ಇರಲಿಲ್ಲ.
ಮೀರಿದ ಮುಹೂರ್ತ: ಸಂಜೆ 4 ರಿಂದ 4.30ರ ವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಾಡದೇವಿಗೆ ಸಿಎಂ ಪುಷ್ಪ ನಮನ ಸಲ್ಲಿಸುವ ಮುಹೂರ್ತ ಈ ಸಲ ಮೀರಿತು. 31 ನಿಮಿಷ ತಡವಾಗಿ ಇದು ನೆರವೇರಿತು.
ಅಂಬಾರಿ ಆನೆಗೆ ಹೊರೆ: ಹೊಸ ಮಾರ್ಗ ಸೃಷ್ಟಿಯಿಂದಾಗಿ ಅಂಬಾರಿ ಆನೆ ಅಭಿಮನ್ಯುಗೆ 21 ನಿಮಿಷ ಹೆಚ್ಚುವರಿ ಭಾರ ಹೊರುವಂತಾಯಿತು. ಹೊಸಮಾರ್ಗವಾದ ಅರಮನೆಯ ಜಯಮಾರ್ತಾಂಡ ದ್ವಾರ ಬಳಿಯ ತ್ರಿನಯನೇಶ್ವರ ದೇಗುಲ, ಗಾಯತ್ರಿ ದೇಗುಲ, ಶ್ರೀ ಶ್ವೇತವರ ದೇಗುಲ ದಾಟಿಕೊಂಡು ವೇದಿಕೆಯತ್ತ ಬಂದಾಗ ಸಂಜೆ 5 ಗಂಟೆ ಆಗಿತ್ತು. ಇದು ಹೆಚ್ಚುವರಿ ಹೊರೆ ಎನಿಸಿತು.
ಎದೆ ಝುಲ್ಲೆನಿಸಿದ ಸಿಡಿಮದ್ದಿನ ಸದ್ದು: ಅರಮನೆ ಆವರಣದ ಒಂದು ಬದಿಯಲ್ಲಿ 21 ಕುಶಾಲತೋಪುಗಳ ಸದ್ದು ನೆರೆದಿದ್ದವರ ಎದೆ ಝುಲ್ಲೆನಿಸಿತು. ಕರ್ನಾಟಕ ಪೊಲೀಸ್ ಬ್ಯಾಂಡ್ ವೃಂದದಿಂದ ರಾಷ್ಟ್ರಗೀತೆಯ ಹಿಮ್ಮೇಳಕ್ಕೆ ಎಲ್ಲರೂ ನಿಂತು ಗೌರವ ಸಲ್ಲಿಸಿದರು.
ಮೈನವಿರೇಳಿಸಿದ ವಜ್ರಮುಷ್ಟಿ ಕಾಳಗ: ದಸರಾ ಮಹೋತ್ಸವದ ಅಂಗವಾಗಿ ಅರಮನೆ ಅಂಗಳದ ಕರಿಕಲ್ಲು ತೊಟ್ಟಿಯಲ್ಲಿ ಶನಿವಾರ ದೇವಮಲ್ಲ ಜಟ್ಟಿಗಳ ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ಮೈನವಿರೇಳಿಸಿತು. ಆದರೆ ಕಾತರದಿಂದ ಗಂಟೆಗಟ್ಟಲೆ ಕಾದು ಕುಳಿತಿದ್ದವರು ಕಾಳಗವನ್ನು ಕಣ್ತುಂಬಿಕೊಂಡಿದ್ದು 1 ನಿಮಿಷ ಮಾತ್ರ! ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದಕತ್ತಿಗೆ ಪೂಜೆ ಸಲ್ಲಿಸಿದ ಕೂಡಲೇ ಕಾಳಗ ಪ್ರಾರಂಭಗೊಂಡಿತು. ಮೊದಲ ಜೋಡಿ ಬೆಂಗಳೂರಿನ ಉಸ್ತಾದ್ ಕೃಷ್ಟ ಜಟ್ಟಿ ಶಿಷ್ಯ ನಾರಾಯಣಸ್ವಾಮಿ ಜಟ್ಟಿ ಮತ್ತು ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಅವರ ಮಗ ಬಲರಾಮ ಜಟ್ಟಿ ನಡುವೆ ಕಾಳಗ ನಡೆಯಿತು. ಎರಡನೇ ಜೋಡಿಯಾಗಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ಶ್ರೀನಿವಾಸ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ರಾಘವೇಂದ್ರ ಜಟ್ಟಿ ನಡುವೆ ಕಾಳಗ ಏರ್ಪಟ್ಟಿತು.
ಈ ಪೈಕಿ ಬೆಂಗಳೂರಿನ ನಾರಾಯಸ್ವಾಮಿ ಜಟ್ಟಿ ಮತ್ತು ಮೈಸೂರಿನ ಬಲರಾಮ ಜಟ್ಟಿ ನಡುವಿನ ಕಾಳಗ ರೋಮಾಂಚನಕಾರಿಯಾಗಿತ್ತು. ಮದಗಜಗಳಂತೆ ಒಬ್ಬರ ಮೇಲೊಬ್ಬರು ಎರಗಿ ಮುಷ್ಟಿ ಪ್ರಯೋಗಕ್ಕೆ ಮುಂದಾಗುತ್ತಿದ್ದರು. ನಾರಾಯಣಸ್ವಾಮಿ ಜಟ್ಟಿ ಛಂಗನೆ ಎಗರಿ ಮಿಂಚಿನ ವೇಗದಲ್ಲಿ ಎದುರಾಳಿ ಬಲರಾಮ ಜಟ್ಟಿ ತಲೆಯ ಭಾಗಕ್ಕೆ ವಜ್ರನಖದಿಂದ ಹೊಡೆದು ಕ್ಷಣಾರ್ಧದಲ್ಲಿ ರಕ್ತ ಚಿಮ್ಮಿಸಿದರು. ಮತ್ತೊಂದು ಕಾಳಗದಲ್ಲಿ ಶ್ರೀನಿವಾಸ ಜಟ್ಟಿ ಮತ್ತು ರಾಘವೇಂದ್ರ ಜಟ್ಟಿ ನಡುವೆಯೂ ರೋಚಕ ಕಾಳಗ ನಡೆಯುತ್ತಿತ್ತು. ಆದರೆ ಒಂದನೇ ಜೋಡಿಯ ಕಾಳಗದಲ್ಲಿ ರಕ್ತ ಚಿಮ್ಮಿದ ಕಾರಣ ಶುಭಸೂಚಕ ಎಂಬಂತೆ ಅಲ್ಲಿಗೆ ಕಾಳಗಕ್ಕೆ ಮಂಗಳ ಹಾಡಲಾಯಿತು.
ನಂದಿಧ್ವಜಕ್ಕೆ ನಮನ: ಸಂಪುಟದ ಕೆಲ ಸಹೋದ್ಯೋಗಿಗಳು, ಶಾಸಕರೊಂದಿಗೆ ‘ಐರಾವತ’ ಬಸ್ನಲ್ಲಿ ಆಗಮಿಸಿದ ಸಿದ್ದರಾಮಯ್ಯ ಅರಮನೆ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.55ರ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಮಿಸಿದರು. ಬಳಿಕ ಅರಮನೆ ಅಂಗಳದಿಂದ ಮೆರವಣಿಗೆಗೆ ಚಾಲನೆ ದೊರೆಯಿತು. ನಿಶಾನೆ ಆನೆಯಾಗಿ ಧನಂಜಯ ದಾರಿ ತೋರಿಸಿದರೆ, ನೌಫತ್ ಆನೆಯಾಗಿ ಗೋಪಿ ಕಾರ್ಯನಿರ್ವಹಿಸಿತು. ಇವುಗಳನ್ನು ಹಿಂಬಾಲಿಸಿದ ಸಾಲಾನೆಗಳಾದ ಸುಗ್ರೀವ, ಪ್ರಶಾಂತ್, ಮಹೇಂದ್ರ, ಏಕಲವ್ಯ, ಕಂಜನ್, ಭೀಮ ಗಾಂಭಿರ್ಯದಿಂದ ಹೆಜ್ಜೆ ಹಾಕಿದವು. ಬಳಿಕ ಜಾನಪದ ಕಲಾಲೋಕ, ಸ್ತಬ್ಧಚಿತ್ರಗಳ ಸಿರಿತನವೂ ಗರಿಬಿಚ್ಚಿಕೊಂಡಿತು.
ಕಲೆ, ಸ್ತಬ್ಧಚಿತ್ರಗಳ ಚೆಲುವು: ವಿವಿಧ ಜಿಲ್ಲೆಗಳ ವೈವಿಧ್ಯತೆ ತುಂಬಿದ, ವಿವಿಧ ಇಲಾಖೆಗಳ 52 ಸ್ತಬ್ಧಚಿತ್ರಗಳ ರಮಣೀಯತೆ ಮೇಳೈಸಿತ್ತು. ಕಲೆ, ವಾಸ್ತುಶಿಲ್ಪ, ಪ್ರವಾಸೋದ್ಯಮ, ಜಾನಪದ, ಸಮಾನತೆ, ಭಾತೃತ್ವ, ಸಂವಿಧಾನದ ಮಹತ್ವ, ಕರ್ನಾಟಕ ಏಕೀಕರಣ ಸಂಭ್ರಮ ಸ್ತಬ್ಧಚಿತ್ರಗಳು ಆಕರ್ಷಿಸಿದವು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆ ಸುಂದರತೆ ತಂದುಕೊಟ್ಟವು. ಮಳೆಯ ನಡುವೆಯೂ ಕಲಾ ತಂಡಗಳು ಚುರುಕಿನ ಪ್ರದರ್ಶನ ನೀಡಿ ಕನ್ನಡ ನಾಡಿನ ಕಲೆ, ಸಂಸ್ಕೃತಿ ಅನಾವರಣಗೊಳಿಸಿದವು. ಕೇರಳ, ತಮಿಳುನಾಡು, ಹರಿಯಾಣ ಸಾಂಪ್ರದಾಯಿಕ ನೃತ್ಯ ಈ ಬಾರಿ ವಿಶೇಷ. ಮೆರವಣಿಗೆ ಸಾಗುವ ಅರಮನೆಯಿಂದ ಹಿಡಿದು ಬನ್ನಿಮಂಟಪದವರೆಗಿನ ಸುಮಾರು 5 ಕಿ.ಮೀ. ಉದ್ದದ ರಸ್ತೆಯ ಇಕ್ಕೆಲಗಳಲ್ಲಿ -ಸ್ಥಳೀಯರು, ರಾಜ್ಯ-ಹೊರ ರಾಜ್ಯದವರು, ವಿದೇಶಿಯರು, ಮಹಿಳೆಯರು, ಮಕ್ಕಳು ಸೇರಿ ಲಕ್ಷಾಂತರ ಜನರು ಸಾಕ್ಷಿಯಾದರು.
ಅವ್ಯವಸ್ಥೆ, ನೂಕುನುಗ್ಗಲಿಗೆ ಜನರು ಹೈರಾಣ: ಮೆರವಣಿಗೆ ನೋಡಲು ಹೆಚ್ಚಿನ ಜನ ಸೇರಿದ್ದರಿಂದ ರಾಜಬೀದಿಯಲ್ಲಿ ನೂಕುನುಗ್ಗಲು ಉಂಟಾಗಿ ಅಂದಾಜು 50 ಜನ ಅಸ್ವಸ್ಥಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ರುಚಿಯನ್ನೂ ತೋರಿಸಿದರು. ಇದರೊಂದಿಗೆ ಅವ್ಯವಸ್ಥೆ, ಅಶಿಸ್ತಿಗೂ ಮೆರವಣಿಗೆ ಕಾರಣವಾಗಿದ್ದರಿಂದ ಬಹಳಷ್ಟು ಜನರಿಗೆ ಬೇಸರ ಉಂಟಾಯಿತು. ಅರಮನೆ ಅಂಗಳದ ಆನೆಗಳು ಸ್ತಬ್ಧಚಿತ್ರ, ಕಲಾತಂಡಗಳ ಮಧ್ಯದಲ್ಲೇ ಹಾದು ಹೋಗಬೇಕಾಯಿತು. ಆನೆದಾರಿಯಲ್ಲೇ ಅನಧಿಕೃತ ವ್ಯಕ್ತಿಗಳು ಸುಲಲಿತವಾಗಿ ಓಡಾಡಿ ಫೋಟೊ ತೆಗೆದುಕೊಂಡರು. ಜನಸಾಮಾನ್ಯರಿಗೂ ಈ ದಾರಿಯಲ್ಲಿ ಅವಕಾಶ ಮಾಡಿಕೊಟ್ಟಿದ್ದು ಭದ್ರಕೋಟೆ ಛಿದ್ರಗೊಂಡಿತು. ಪುಷ್ಪಾರ್ಚನೆಗಾಗಿ ಅಭಿಮನ್ಯು ಬಂದಾಗಲೂ ಅನಧಿಕೃತರ ಕಾರುಬಾರು ಎಲ್ಲೆ ಮೀರಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಇದು ಭದ್ರತಾ ವೈಫಲ್ಯ ತೋರಿಸಿತು. ಮೈನವಿರೇಳಿಸಿದ ಪಂಜಿನ ಕವಾಯತು: ಬನ್ನಿಮಂಟಪದಲ್ಲಿ ಸಂಜೆ ನಡೆದ ಪಂಜಿನ ಕವಾಯತು ವಿವಿಧ ಸಾಹಸ ಪ್ರದರ್ಶನಕ್ಕೆ ವೇದಿಕೆಯಾಯಿತು. ಪ್ರದರ್ಶನಕಾರರು ಅನುಭವ ಹಾಗೂ ಪ್ರತಿಭೆಯನ್ನು ಧಾರೆ ಎರೆಯುವ ಮೂಲಕ ಕಿಕ್ಕಿರಿದು ತುಂಬಿದ್ದ ಜನರನ್ನು ಅಚ್ಚರಿಗೊಳಿಸಿದರು. ಆಕರ್ಷಕ ಪರೇಡ್, ಮುದ ನೀಡಿದ ಪೊಲೀಸ್ ಬ್ಯಾಂಡ್ನ ಹಿಮ್ಮೇಳ ಶೋಭೆ ತಂದುಕೊಟ್ಟರೆ, ಅಶ್ವಾರೋಹಿ ಪಡೆ ಪ್ರದರ್ಶಿಸಿದ ‘ಟೆಂಟ್ ಪೆಗ್ಗಿಂಗ್’ ಮತ್ತು ಮಿಲಿಟರಿ ಪಡೆಯ ವಿವಿಧ ಸಾಹಸಗಳು ಮೈನವಿರೇಳಿಸಿತು. ಕೊನೆಯಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಂದೀಲು ಹಿಡಿದು ಪಂಜಿನ ಕವಾಯತು ಸೊಬಗಿನಿಂದೊಂದಿಗೆ ದಸರೆೆಗೆ ತೆರೆ ಬಿದ್ದಿತ್ತು.
ಅಭಿಮನ್ಯು ಗಾಂಭೀರ್ಯದ ನಡಿಗೆ: ಪುಷ್ಪಾರ್ಚನೆ ಸ್ವೀಕರಿಸಿ ಹೊರಟ ಜಂಬೂಸವಾರಿ, ಬಲರಾಮ ದ್ವಾರದ ಮೂಲಕ ರಾಜಪಥ ಪ್ರವೇಶಿಸಿತು. ಅಲ್ಲಿಂದ ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೆದ ಆಸ್ಪತ್ರೆ ಎದುರು, ಬಂಬೂಬಜಾರ್, ಹೈವೇ ವೃತ್ತ, ನೆಲ್ಸನ್ ಮಂಡೇಲಾ ವೃತ್ತದ ಮೂಲಕ ಸಂಜೆ 7.03 ರ ಸುಮಾರಿಗೆ ಬನ್ನಿಮಂಟಪ ತಲುಪಿತು. ಕುಮ್ಕಿಗಳಾದ ಬಲಭಾಗದಲ್ಲಿ ಲಕ್ಷ್ಮೀ ಮತ್ತು ಎಡಭಾಗದಲ್ಲಿ ಹಿರಣ್ಯ ಹೆಣ್ಣಾನೆಗಳು ಅಭಿಮನ್ಯುವನ್ನು ಶಾಂತಗೊಳಿಸಿ, ಗುರಿ ಮುಟ್ಟಲು ಸಾಥ್ ನೀಡಿದವು.