ಯುವಕರಲ್ಲೂ ಹೆಚ್ಚಿತ್ತಿದೆ ಹೃದ್ರೋಗ: ಆತಂಕ ವ್ಯಕ್ತಪಡಿಸಿದ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್

16
Published on

ಮೈಸೂರು: ಯೋಗ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ತಿಳಿಸಿದರು.
ನಗರದ ಜಯದೇವ ಆಸ್ಪತ್ರೆಯಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆ ಹಾಗೂ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಡಿಯೋ ಯೋಗ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಬದಲಾದ ಜೀವನಶೈಲಿಯಿಂದ ಹೃದಯರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೆ ಪಟ್ಟಣದಲ್ಲಿ ವಾಸಿಸುವವರಿಗೆ ಹೃದಯ ಕಾಯಿಲೆ ಹೆಚ್ಚಾಗಿ ಬರುತ್ತಿತ್ತು. ಆದರೆ ಈಗ ಗ್ರಾಮೀಣ ಭಾಗದ ಜನರಿಗೆ ಹಾಗೂ ಯುವಕರಲ್ಲಿಯೂ ಹೃದಯರೋಗ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿರಬೇಕಾದರೆ ಯೋಗ ಉತ್ತಮ ಸಾಧನ. ಮಹರ್ಷಿ ಪತಂಜಲಿ, ಸ್ವಾಮಿ ವಿವೇಕಾನಂದರ ಕೊಡುಗೆ ಯೋಗಕ್ಕೆ ಅಪಾರವಾಗಿದೆ. ದೇಹದ ಎಲ್ಲಾ ಅಂಗಾಂಗಳಿಗೂ ಯೋಗದಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದ ಅವರು ಇಂತಹ ಕಾರ್ಯಾಗಾರಗಳು ಆಗಾಗ್ಗೆ ನಡೆಯಬೇಕು ಎಂದರು.
ಆಯುಷ್ ಇಲಾಖೆ ಆಯುಕ್ತ ಡಾ.ಶ್ರೀನಿವಾಸಲು, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎ. ಶೇಖರ್, ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಸೀತಾಲಕ್ಷ್ಮಿ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ, ವೈದ್ಯರಾದ ಡಾ. ಎಂಜಲ್‌ರಾಜ್, ಡಾ. ಗುರು ಬಸವರಾಜು, ಡಾ. ವೇದಾವತಿ, ಡಾ. ವೀಣಾನಂಜಪ್ಪ, ಡಾ. ಸಂತೋಷ್, ಡಾ. ರಾಜೀವ್, ಡಾ. ಪ್ರಭಾವತಿ, ಡಾ.ವಾದಿರಾಜು, ಡಾ.ಮಂಜುನಾಥ್, ಡಾ.ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net