

ಹುಬ್ಬಳ್ಳಿ: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿಯಿಂದ ಪ್ರಸ್ತುತ ಮನುಷ್ಯನಲ್ಲಿ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಚಿಕ್ಕ ಮಕ್ಕಳು ಸಹ ಹೃದಯಾಘಾತ ಸೇರಿ ಇತರ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಆರೋಗ್ಯ ಜಾಗೃತಿಗೆ ಇಂತಹ ಶಿಬಿರಗಳ ಅಗತ್ಯವಿದೆ ಎಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಮಣಕವಾಡದ ಶ್ರೀ ಗುರು ಅನ್ನದಾನೀಶ್ವರ ದೇವಮಂದಿರ ಮಹಾಮಠದ ಆಶ್ರಯದಲ್ಲಿ ತಾಲೂಕಿನ ಮಣಕವಾಡದ ಶ್ರೀಮಠದ ಮೃತ್ಯುಂಜಯ ದಾಸೋಹ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನ್ಮ ಕೊಟ್ಟ ತಾಯಿ ಮೊದಲ ದೇವರಾದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗೆ ಉತ್ತಮ ಚಿಕಿತ್ಸೆ ನೀಡಿ ಪುನರ್ಜನ್ಮ ಕಲ್ಪಿಸುವ ವೈದರು ಎರಡನೇ ದೇವರಿದ್ದಂತೆ ಎಂದರು.
ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಸಮಾಜದಿಂದ ಎಲ್ಲವನ್ನು ಪಡೆದ ನಾವು ಸಮಾಜಕ್ಕೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕು ಎಂಬ ಉದ್ದೇಶದಿಂದ ವಿವಿಧ ಧಾರ್ಮಿಕ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಜನಮೇಜಯ, ಡಾ. ಅಖಿಲೇಶ ಜೋಶಿ, ಡಾ. ಅಬ್ರಾರ, ಮುಖಂಡರಾದ ಗುರುಪಾದಪ್ಪ, ರಾಜು ಹರ್ಲಾಪುರ, ಎನ್.ಎಸ್. ನೆಲವಡಿ, ಇತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಎಲುಬು-ಕೀಲು, ನರರೋಗ, ಹೃದ್ರೋಗ ಸೇರಿ ಇತರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸಿ, ಔಷಧ ವಿತರಿಸಿದರು. 220ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.