ಆಧುನಿಕ ಜೀವನಶೈಲಿಯಿಂದ ಹೃದ್ರೋಗ ಉಲ್ಬಣ

NARAGUD TAPASANE
Published on

ನರಗುಂದ: ಆಧುನಿಕ ಜೀವನ ಶೈಲಿಯಿಂದಾಗಿ ಹೃದ್ರೋಗಗಳು ಉಲ್ಬಣವಾಗುತ್ತಿವೆ. ವೈದ್ಯರ ಸಲಹೆ ಮೇರೆಗೆ ವಿವಿಧ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದರಿಂದ ಮಾತ್ರ ಹೃದ್ರೋಗಗಳನ್ನು ತಡೆಯಲು ಸಾಧ್ಯ ಎಂದು ಧಾರವಾಡದ ನಾರಾಯಣ (ಎಸ್​ಡಿಎಂ) ಹಾರ್ಟ್ ಸೆಂಟರ್ ವೈದ್ಯ ಡಾ. ಜಯಪ್ರಕಾಶ ಹೇಳಿದರು.

ವೈದ್ಯರ ದಿನಾಚರಣೆ ಪ್ರಯುಕ್ತ ತಾಲೂಕಿನ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಧಾರವಾಡದ ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್, ಗ್ರಾಪಂ ಚಿಕ್ಕನರಗುಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಉಚಿತ ಆರೋಗ್ಯ ಶಿಬಿರ ಆಯೋಜಿಸುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಬಡವರಿಗೆ ಅನುಕೂಲಕರವಾಗಲಿದೆ ಎಂದರು.

ಶಿಬಿರದಲ್ಲಿ 200ಕ್ಕೂ ಅಧಿಕ ರೋಗಿಗಳಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಮಾಡಲಾಯಿತು. 100 ಜನರಿಗೆ ಬಿಆರ್​ಬಿಎಸ್, ಬಿಪಿ, ಇಸಿಜಿ, 2ಡಿ, ಇಕೋ ಪರೀಕ್ಷೆಗಳನ್ನು ಕೈಗೊಂಡು ಐವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದರು.

ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಭಿಷೇಕ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕಂಬಳಿ, ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ, ಸದಸ್ಯರಾದ ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ವೀರಯ್ಯ ಬಾಳಿಕಾಯಿ, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net