ಯುವಜನರಲ್ಲಿ ಹೃದಯಾಘಾತ ಕಳವಳಕಾರಿ

16-11-Shiva-1
ರಾಯಚೂರಿನ ವಿಜಯಾ ಪಾಲಿ ಕ್ಲಿನಿಕ್‌ನಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಹೃದಯ ರೋಗ ತಜ್ಞ ಡಾ.ಅಜೀತ್ ಕುಲಕರ್ಣಿ ಮಾತನಾಡಿದರು. ರಿಪೋರ್ಟರ್ಸ್‌ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಇದ್ದರು.
Published on

ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದ್ದು, ಅದರಲ್ಲೂ 35 ರಿಂದ 40 ವರ್ಷದೊಳಗಿನವರು ಹೃದಯಾಘಾತದಿಂದ ಇತ್ತೀಚಿನ ದಿನಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಜಿಕೆ ಹಾರ್ಟ್ ಇನ್ಸಿಟ್ಯೂಟ್‌ನ ಮುಖ್ಯಸ್ಥ ಡಾ.ಅಜೀತ್ ಕುಲಕರ್ಣಿ ತಿಳಿಸಿದರು.
ಸ್ಥಳೀಯ ವಿಜಯಾ ಪಾಲಿ ಕ್ಲಿನಿಕ್‌ನಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಬದಲಾಗುತ್ತಿರುವ ನಮ್ಮ ದಿನಚರಿ ಹಾಗೂ ಆಹಾರ ಪದ್ಧತಿಯಿಂದಾಗಿ ಹೃದಯ ರೋಗ ಹೆಚ್ಚಾಗುತ್ತಿದೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರಿಗೆ ಹೃದಯಾಘಾತವಾಗುತ್ತಿದ್ದು, ಪ್ರತಿ 10 ನಿಮಿಷಗಳಿಗೆ ಒಬ್ಬರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಸಣ್ಣ ವಯಸ್ಸಿನವರಲ್ಲಿ ಹೃದಯ ರೋಗ ಕಂಡು ಬರುತ್ತಿರುವುದು ಕಳವಳಕಾರಿಯಾಗಿದೆ.
ಪ್ರತಿಯೊಬ್ಬರು ಹೃದಯರೋಗದ ಲಕ್ಷಣಗಳನ್ನು ಅರಿತುಕೊಂಡು ಲಕ್ಷಣ ಕಂಡು ಬಂದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಜತೆಗೆ ಉತ್ತಮ ಆರೋಗ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಾ.ಅಜೀತ್ ಕುಲಕರ್ಣಿ ತಿಳಿಸಿದರು.
ರಿಪೋರ್ಟರ್ಸ್‌ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಪತ್ರಕರ್ತರಿಗಾಗಿ ಕ್ರೀಡಾ ಸ್ಪರ್ಧೆ, ಸಂವಾದ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ಬಾರಿ ಡಾ.ಅಜೀತ್ ಕುಲಕರ್ಣಿ ತಾವಾಗಿಯೇ ಪತ್ರಕರ್ತರಿಗೆ ಉಚಿತವಾಗಿ ತಪಾಸಣೆಗೆ ಮುಂದೆ ಬಂದು ಅನುಕೂಲ ಕಲ್ಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಿಪೋರ್ಟರ್ಸ್‌ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಶ್ರೀನಿವಾಸ ಇನಾಮದಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net