

ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಕೆಂದು ಒತ್ತಾಯಿಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾರ್ವರ್ಡ್ ವಿದ್ವಾಂಸ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ವಿಚಾರಣೆ ಇತ್ತೀಚೆಗೆ ಹೈಕೋರ್ಟ್‌ನಲ್ಲಿ ನಡೆಯಿತು.
ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ವಿಭಾಗೀಯ ಪೀಠ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿತು. ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಅವರ ಕಾನೂನು ಸಹಾಯಕರು ವಿಚಾರಣೆ ಸಂದರ್ಭ ಭಾಗಿಯಾಗಿದ್ದರು.
ಸಿಎನ್‌ಸಿ ಬೇಡಿಕೆಗೆ ಆಕ್ಷೇಪ ಸಲ್ಲಿಸಿದ ಪ್ರತಿವಾದಿಗಳ ಅಹವಾಲನ್ನು ಕೂಡ ಆಲಿಸಿದ ಮುಖ್ಯ ನ್ಯಾಯಾಧೀಶರು ವಿಚಾರಣೆಯ ಮುಂದಿನ ದಿನಾಂಕವನ್ನು ೨೦೨೫ ಜೂ.೯ಕ್ಕೆ ನಿಗದಿಪಡಿಸಿದರು.
ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಯು.ನಾಚಪ್ಪ ಅವರು, ಜೂ.೯ರಂದು ಡಾ.ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಯಾಲಯದಲ್ಲಿ ಸಮಗ್ರ ವಾದ ಮಂಡನೆ ಮಾಡಲಿದ್ದಾರೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾನೂನು ಹೋರಾಟದಿಂದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ನ್ಯಾಯ ಸಿಗಲಿದೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಪಡೆಯುವ ವಿಶ್ವಾಸವಿದೆ ಎಂದರು.
ಕೊಡವ ಲ್ಯಾಂಡ್ ಬೇಡಿಕೆ ತಾರ್ಕಿಕ ಅಂತ್ಯ ಕಾಣುವಲ್ಲಿಯವರೆಗೆ ಹೋರಾಟ ಅಚಲ ಮತ್ತು ಮುಂದುವರಿಯಲಿದೆ. ಕಳೆದ ೩೫ ವರ್ಷಗಳಿಂದ ಸಿಎನ್‌ಸಿ ಸಂಘಟನೆ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ. ಕೊಡವರಿಗೆ ಕೊಡವ ಲ್ಯಾಂಡ್ ಬಿಟ್ಟರೆ ಬೇರೆ ಪ್ರದೇಶವಿಲ್ಲ. ಆದ್ದರಿಂದ ಕೊಡವ ಲ್ಯಾಂಡ್‌ನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಕಾನೂನಿನ ನೆರವು ಕೋರಲಾಗಿದೆ ಎಂದು ತಿಳಿಸಿದರು.
ವಿರಾಟ್ ಹಿಂದೂಸ್ತಾನ್ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ವಿಎಚ್‌ಎಸ್ ರಾಜ್ಯಾಧ್ಯಕ್ಷ ನಿಖುಂಜ್ ಶಾ, ರೇಖಾ ನಾಚಪ್ಪ, ಕುಮಾರಿ ಶ್ರೇಯಾ ನಾಚಪ್ಪ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಪಾಲಂದಿರ ಜೋಯಪ್ಪ, ಬೇಪಡಿಯಂಡ ಬಿದ್ದಪ್ಪ ಇತರರು ಹಾಜರಿದ್ದರು.