

ಶ್ರೀಶೈಲಂ: ತಂದೆ ತಾಯಂದಿರು ಮತ್ತು ಬಂಧುಗಳ ಬಂಧನಕಾರಕವಾದ ಮಾತುಗಳನ್ನು ಕೇಳುವ ಮೂಲಕ ಮನುಷ್ಯನಿಗೆ ಪ್ರಾಪ್ತವಾದ ಮಮಕಾರದ ಬಂಧನವು ಗುರುವಿನಿಂದ ಶಾಸ್ತ್ರೋಕ್ತವಾದ ಮಾತುಗಳನ್ನು ಶ್ರವಣ ಮಾಡುವುದರಿಂದ ನಿವೃತ್ತಿಯಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಶ್ರೀಶೈಲದಲ್ಲಿ ಶುಕ್ರವಾರ 14 ನೇ ವರ್ಷದ ಶ್ರಾವಣ ಮಾಸದ ತಪೋನುಷ್ಠಾನ ಮತ್ತು ಮಹಾತ್ಮರ ಬದುಕು ಮತ್ತು ಬೆಳಕು ಪ್ರವಚನದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಏನೂ ಗೊತ್ತಿರದ ಮಗುವಿಗೆ ಚಿಕ್ಕವನಿದ್ದಾಗ ಇದು ನಿನ್ನದು, ಇವರು ನಿನ್ನವರು, ಇದು ನಿನ್ನ ಮನೆ, ಇದು ನಿನ್ನ ಅಂಗಡಿ, ಇದು ನಿನ್ನ ಹೊಲ ಎಂದು ಹೇಳುವುದರಿಂದ ಮನುಷ್ಯನಿಗೆ ಮಮಕಾರದ ಬಂಧನ ಪ್ರಾಪ್ತವಾಗಿರುತ್ತದೆ. ಈ ಮಮಕಾರವೇ ಮನುಷ್ಯನ ಎಲ್ಲ ದುಃಖಗಳಿಗೆ ಕಾರಣವಾಗಿರುತ್ತದೆ. ಜೀವಾತ್ಮನ ದುಃಖ ನಿವೃತ್ತಿ ಆಗಬೇಕಾದರೆ ಮೊದಲು ಮಮಕಾರ ಕಳೆದುಕೊಳ್ಳುವುದು ಅತಿ ಅವಶ್ಯಕ. ಅಂತೆಯೆ ಗುರುಗಳು ತಮ್ಮ ಬಳಿಗೆ ಬಂದ ಶಿಷ್ಯನಿಗೆ ಇದಾವುದೂ ನಿನ್ನದಲ್ಲ, ಇವರಾರೂ ನಿನ್ನವರಲ್ಲ ಎಂದು ವಿರತಿಯ ಉಪದೇಶ ಮಾಡುತ್ತಾರೆ ಎಂದು ಹೇಳಿದರು.
ಶ್ರೀಶೈಲ ದೇವಸ್ಥಾನದ ಅಧಿಕಾರಿ ಶ್ರೀಹರಿದಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಯಲ್ಲಿ ಪೀಠದ ಮಾರ್ಗದರ್ಶನ ಅತ್ಯಂತ ಅವಶ್ಯಕ. ರಾಜ್ಯದ ತುಂಬೆಲ್ಲ ಅಲ್ಲಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣವಾಗಬೇಕು. ಇದರ ಜವಾಬ್ದಾರಿಯನ್ನು ಶ್ರೀಶೈಲ ಜಗದ್ಗುರುಗಳು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ವಿಜಯಪುರದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ‘ಮಹಾತ್ಮರ ಬದುಕು ಮತ್ತು ಬೆಳಕು’ ವಿಷಯವನ್ನಾಧರಿಸಿ ತಿಂಗಳ ಪರ್ಯಂತ ನಡೆಯುವ ಪ್ರವಚನ ಪ್ರಾರಂಭಿಸಿದರು.
ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕರಾದ ವೀರಯ್ಯಸ್ವಾಮಿ ಮತ್ತು ಶಿವಪ್ರಸಾದ, ಮುಖ್ಯ ಮ್ಯಾನೇಜರ್ ಮಂಜುನಾಥ ಎಂ.ಬಿ. ಸ್ವಾಗತಿಸಿದರು. ಶರಣೆ ನೀಲಮ್ಮ ಸಂಗೀತ ಸೇವೆ ನೀಡಿದರು. ಶ್ರೀಶೈಲದ ವೀರಶೈವ ಗುರುಕುಲದ ಹಾಗೂ ಯಡೂರ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಮಾಡಿದರು.
ಆ. 8 ರಿಂದ ಆರಂಭವಾದ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ನಿಮಿತ್ತ ಜಗದ್ಗುರುಗಳು ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ, ಭ್ರಮರಾಂಬ ದೇವಿಗೆ ಮತ್ತು ಜಗದ್ಗುರು ಪಂಡಿತರಾಧ್ಯರ ಲಿಂಗೋದ್ಭವ ಮೂರ್ತಿಗೆ ವಿಶೇಷ ಪೂಜೆ ಮತ್ತು ಮಂಗಳಾರತಿ ನೆರವೇರಿಸಿದರು. ಸೆ. 2 ರ ವರೆಗೆ ತಪೋನುಷ್ಠಾನ ನಡೆಯಲಿದ್ದು, ನಿತ್ಯ ವಿಭಿನ್ನ ಪ್ರಾಂತ ನಗರ ಗ್ರಾಮಗಳಿಂದ ಭಕ್ತರು ಬಂದು ಪೂಜೆಯಲ್ಲಿ ಪಾಲ್ಕೊಳ್ಳುತ್ತಿದ್ದಾರೆ ಎಂದು ಪೀಠದ ವಾರ್ತಾಧಿಕಾರಿ ಬಸಯ್ಯ ವಸ್ತ್ರದ ತಿಳಿಸಿದ್ದಾರೆ.