

ಕೆ.ಆರ್.ಪೇಟೆ: ಶ್ರವಣದೋಷದಿಂದ ಬಳಲುತ್ತಿರುವ ತಾಲೂಕಿನ ಮಕ್ಕಳನ್ನು ಗುರುತಿಸಿ ಅವರಿಗೆ ಶ್ರವಣ ಸಾಧನ ವಿತರಿಸುವ ಕೆಲಸವನ್ನು ಮುಂಬೈ ಮೂಲದ ವಾಕ್ ಮತ್ತು ಶ್ರವಣ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಮುಂಬೈ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಶ್ರವಣದೋಷ ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ಶ್ರವಣ ದೋಷವಿರುವ ಮಕ್ಕಳಿಗೆ 40 ಸಾವಿರ ರೂ.ಮೌಲ್ಯದ ಅತ್ಯಾಧುನಿಕ ಡಿಜಿಟಲ್ ಸಾಧನ ನೀಡಿರುವುದು ಮಾದರಿ ಕಾರ್ಯ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಇನ್ನಷ್ಟು ಹೆಚ್ಚಲಿ ಎಂದು ಆಶಿಸಿದರು.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಮುಂಬೈ ಶಾಖೆ ಮುಖ್ಯಸ್ಥ ಭೋಜರಾಜೇಗೌಡ, ಗಂಗಾಧರಗೌಡ, ಡಿಎಚ್‌ಒ ಧನಂಜಯ, ಡಾ.ಶಶಿಧರ್, ಡಾ.ಗಾಯತ್ರಿ, ತಹಸೀಲ್ದಾರ್ ಎಂ.ವಿ.ರೂಪಾ, ಡಾ.ಶಿವಕುಮಾರ್, ಬಿಇಒ ಸೀತಾರಾಮು, ಬಿಆರ್‌ಸಿ ಲಿಂಗರಾಜು ಇತರರು ಹಾಜರಿದ್ದರು.