

ರಬಕವಿ-ಬನಹಟ್ಟಿ: ಆಧುನಿಕ ಜೀವನಶೈಲಿಯಲ್ಲಿ ಒಂದಿಷ್ಟು ಸಂಸ್ಕಾರ, ಸಂಸಕ್ಕತಿ ಯೋಗಾಭ್ಯಾಸ ಬೆಳೆಸಿಕೊಂಡರೆ ಮಾತ್ರ ಆರೋಗ್ಯವಂತ ಬದುಕು ಸಾಗಿಸಲು ಸಾಧ್ಯ ಎಂದು ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಜಗದ್ಗುರು ಯೋಗಾಚಾರ್ಯ ಶಿವಶಂಕರ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಮಠದಲ್ಲಿ ಶುಕ್ರವಾರ ಜರುಗಿದ ಯೋಗ ಹಾಗೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಂಸ್ಕಾರ ಬೆಳೆಸಿಕೊಂಡರೆ ಮಾತ್ರ ಪ್ರಬುದ್ಧ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗುತ್ತದೆ. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಯೋಗ, ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಲ್ಲಿ ಸೇರಿಸುವ ಮೂಲಕ ಸನ್ಮಾರ್ಗದ ಹಾದಿ ತೋರಿಸಬೇಕು ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ತಂದೆ ತಾಯಿಗೆ ಗೌರವ ನೀಡುವುದರಿಂದ ಸಕಲವೂ ದೊರೆಯುತ್ತದೆ. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಆಚಾರ, ವಿಚಾರ, ಸಂಸ್ಕಾರ ಸಂಸ್ಕೃತಿ ಸೇರಿದಂತೆ ಅಧ್ಯಾತ್ಮದ ಅರಿವಾಗುತ್ತದೆ ಎಂದರು.
ಶಿಬಿರಾರ್ಥಿಗಳು ಪಾಲಕರ ಪಾದಪೂಜೆ ನೆರವೇರಿಸಿದರು. ಕನ್ಹೇರಿ ಮಠದ ಬಸವರಾಜ ಶ್ರೀಗಳು, ಬಸಪ್ಪ ಎಂಟೆತ್ತಿನವರ, ಸುಭಾಸ ಕಂಪು, ಮಲ್ಲಪ್ಪ ಗಣಿ, ದಾನಪ್ಪ ಆಸಂಗಿ, ಹಣಮಂತ ಮಗದುಮ್, ಗುರು ಮರಡಿಮಠ, ಆನಂದ ಕಂಪು, ಗಿರೀಶ ಕಾಂತಿ, ಗಂಗಪ್ಪ ಅಮ್ಮಲಜೇರಿ, ನಿಂಗಪ್ಪ ಕಾಂತಿ, ಕಾಶಪ್ಪ ನಾಯಕ, ಸಿದ್ದು ಕಂಚು, ಈರಪ್ಪ ಕಡಕಬಾನಿ, ಮಲ್ಲಪ್ಪ ಗಂಗಾವತಿ ಮತ್ತಿತರರಿದ್ದರು.