ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯವಂತ ಮಕ್ಕಳು ರಾಷ್ಟ್ರದ ಬಹುದೊಡ್ಡ ಆಸ್ತಿ. ಮಕ್ಕಳ ಆರೋಗ್ಯಯುತ ಬೆಳವಣಿಗೆ ಮತ್ತು ಅವರಿಗೆ ಸಮಗ್ರ ಪೌಷ್ಠಿಕಾಂಶ ದೊರಕುವಂತೆ ಮಾಡಲು ಸರ್ಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅವುಗಳ ಪರಿಣಾಮಕಾರಿ ಜಾರಿ ನಮ್ಮ ಜವಾಬ್ದಾರಿ ಆಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಕೆ.ಇ. ಬೋರ್ಡ ಸಂಸ್ಥೆಯ ಕರ್ನಾಟಕ ಹೈಸ್ಕೂಲ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ನಿಮಿತ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ವಿತರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ನಿಮಿತ್ತ ಜಿಲ್ಲೆಯ 5,80,127 ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ಮಾತ್ರೆಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಸರ್ಕಾರದಿಂದ ಮಕ್ಕಳ ವಿದ್ಯಾಭ್ಯಾಸ ಸುಧಾರಣೆಗೆ ಆರೋಗ್ಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, 1 ವರ್ಷದಿಂದ 19 ವರ್ಷದವರೆಗಿನ ಮಕ್ಕಳಿಗೆ ಜಂತು ಹುಳುವಿನ ಮಾತ್ರೆ ವಿತರಿಸಲಾಗುತ್ತಿದ್ದು, ಇದರ ಉದ್ದೇಶ ರೋಗ ಮುಕ್ತ ಉತ್ತಮ ಸಮಾಜದ ಸ್ಥಾಪನೆಯಾಗಿದೆ. ಜಂತು ಹುಳುವನ್ನು ತಡೆಗಟ್ಟಿದರೆ, ಅನಿಮಿಯ ತಡೆಗಟ್ಟಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ನಿರ್ಲಕ್ಷಿಸದೆ 6 ತಿಂಗಳಿಗೆ ಒಮ್ಮೆ ಮಾತ್ರೆ ತೆಗೆದುಕೊಳ್ಳಬೇಕು ಎಂದರು.
ಕೆ.ಇ.ಬೋರ್ಡ್ ಸಂಸ್ಥೆ ಆಡಳಿತಾಧಿಕಾರಿ ಜಿ.ಆರ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವಿಮಠ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಅಶೋಕ ಸಿಂದಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಎನ್.ತನುಜಾ, ಆರೋಗ್ಯ ಇಲಾಖೆ ಅಧಿಕಾರಿ ಬಿ.ಆರ್.ಪಾತ್ರೋಟ, ಇತರರು ಇದ್ದರು.
ಎನ್.ಎಸ್.ಸವಣೂರ ಸ್ವಾಗತಿಸಿದರು. ರೇಖಾ ಬಾಡಗಿ ನಿರೂಪಿಸಿದರು. ಎ೦.ಎನ್.ಅಗಡಿ ವಂದಿಸಿದರು.