

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧೆಡೆ ಸ್ಕಾನಿಂಗ್ ಸೆಂಟರ್ ಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಸವ ಪೂರ್ವ ಮತ್ತು ಗರ್ಭ ಪೂರ್ವ ಲಿಂಗ ಪತ್ತೆ ತಂತ್ರಗಳು ಕಾಯ್ದೆಯಡಿಯ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ತಂಡವು ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿತು.
ಶಿಡ್ಲಘಟ್ಟ ತಾಲೂಕಿನ ಜನನಿ ಡಯಾಗ್ನೋಸ್ಟಿಕ್ ಸೆಂಟರ್, ಚಿಂತಾಮಣಿಯ ವಿಕ್ರಮ್ ಸ್ಕಾನಿಂಗ್ ಸೆಂಟರ್ ಸೇರಿದಂತೆ ವಿವಿಧೆಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್ ನೇತೃತ್ವದ ತಂಡವು ದಿಢೀರ್ ಭೇಟಿ ನೀಡಿ ತಪಾಸಣೆ ಕೈಗೊಂಡಿತು. ಕಾನೂನು ನಿಯಮಗಳನ್ನು ಉಲ್ಲಂಘಿಸಿರುವ ಕೇಂದ್ರಗಳಿಗೆ ನೋಟೀಸ್ ನೀಡಿದೆ.
ಈ ಸಂದಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಚಂದ್ರಶೇಖರ್ ರೆಡ್ಡಿ, ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಡಾ. ಅರ್ಜುನ್ ಬಹದ್ದೂರ್, ಚಿತ್ರಾವತಿ, ವೆಂಕಟರೆಡ್ಡಿ ಮತ್ತಿತರರು ಇದ್ದರು.
ಭ್ರೂಣ ಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧ. ಕೆಲವರು ಹೆಣ್ಣು ಮಗು ಹುಟ್ಟಬಹುದು ಎಂಬ ತಾತ್ಸರ ಮನೋಭಾವನೆಯಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿನ ಭ್ರೂಣ ಲಿಂಗ ಪತ್ತೆಗೆ ಮುಂದಾಗುತ್ತಿದ್ದಾರೆ. ಬಳಿಕ ಆಂಧ್ರಗೆ ಹೋಗಿ, ಅರ್ಬಾಷನ್ ಮಾಡಿಸುತ್ತಿದ್ದಾರೆ. ಇಂತಹ ಪ್ರಕರಣಗಳ ಮೇಲೆ ಕಣ್ಣಿಟ್ಟಿರುವ ಆರೋಗ್ಯ ಇಲಾಖೆಯು ನಿರಂತರವಾಗಿ ಸ್ಕಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸುತ್ತಿದೆ. ನಿಯಮಗಳನ್ನು ಉಲ್ಲಂಘಿಸದಂತೆ ಎಚ್ಚರಿಕೆಯನ್ನು ನೀಡುತ್ತಿದೆ.