

ಶಿವರಾಜ ಎಂ. ಬೆಂಗಳೂರು
ಸುಮಾರು 36 ಇಲಾಖಾ ಕಚೇರಿಯ ಸಾವಿರಾರು ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಹಾಗೂ ಪ್ರತಿನಿತ್ಯ ನೂರಾರು ಸಾರ್ವಜನಿಕರು ಬಂದು ಹೋಗುವ ಜಿಲ್ಲಾಡಳಿತ ಭವನದಲ್ಲೇ ಆರೋಗ್ಯ ರಕ್ಷಣೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ.
ತುರ್ತು ಪರಿಸ್ಥಿತಿಯಲ್ಲಾದರೂ ಕನಿಷ್ಠ ವೈದ್ಯಕೀಯ ಸೇವೆ ದೊರಕಿಸಿಕೊಡುವ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಚಪ್ಪರಕಲ್ಲಿಗೆ 2018ರ ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ 2019 ಜನವರಿ 15ರಂದು ಜಿಲ್ಲಾ ಪಂಚಾಯಿತಿ ಕಚೇರಿಗಳು ಸ್ಥಳಾಂತರಗೊಂಡಾಗಿನಿಂದಲೂ ಆರೋಗ್ಯ ಕೇಂದ್ರದ ಅವಶ್ಯಕತೆ ಬಗ್ಗೆ ಸಾರ್ವಜನಿಕರು ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಕಾಲ ಕೂಡಿ ಬಂದಿಲ್ಲ. ಹಲವು ಸಭೆಗಳಲ್ಲೂ ಈ ಬಗ್ಗೆ ಪ್ರಸ್ತಾಪವಾಗಿದ್ದರೂ ಕನಿಷ್ಠ ಸೇವೆ ನೀಡಲು ಜಿಲ್ಲಾಡಳಿತ ಮುಂದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕನ್ಯಾಕುಮಾರಿ ಅಸಮಾಧಾನ: ಜಿಲ್ಲಾಡಳಿತ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದು ಜಿಪಂ ಉಪಾಧ್ಯಕ್ಷೆಯಾದಾಗಿನಿಂದ ಕನ್ಯಾಕುಮಾರಿ ಶ್ರೀನಿವಾಸ್ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಇದೇ ವಿಷಯವನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಆರೋಗ್ಯ ಕೇಂದ್ರ ಸ್ಥಾಪನೆಗೆ ಕಾಳಜಿ ವಹಿಸುತ್ತಿಲ್ಲ.
ಜಿಲ್ಲಾಡಳಿತ ಮೌನವೇಕೆ?: ವರ್ಷದ ಹಿಂದೆ ಜಿಲ್ಲಾಡಳಿತ ಭವನದಲ್ಲಿ ಆಧಾರ್‌ಕಾರ್ಡ್ ನೋಂದಣಿಗಾಗಿ ಆಟೋದಲ್ಲಿ ಬಂದು ವಾಪಸ್ ಮರಳುತ್ತಿದ್ದ ಶಾಲಾ ವಿದ್ಯಾರ್ಥಿಗಳು ಭವನದ ಎದುರೇ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಸಾಧ್ಯವಾಗದೆ ದೂರದ ಊರುಗಳಿಗೆ ರವಾನಿಸಬೇಕಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಜೀವಕ್ಕೆ ಕುತ್ತುತಂದಿತ್ತು. ತುರ್ತು ಪರಿಸ್ಥಿತಿಯಲ್ಲಿ 12 ಕಿಮೀ ದೂರದ ದೊಡ್ಡಬಳ್ಳಾಪುರ ಅಥವಾ ದೇವನಹಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅಷ್ಟೆ ಅಲ್ಲದೆ ಈ ಹಿಂದೆ ಇದೇ ಭವನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಪ್ರತಿನಿತ್ಯ ಒಂದಿಲ್ಲೊಂದು ಪ್ರತಿಭಟನೆ ಧರಣಿಗಳು ನಡೆಯುವ ಜಿಲ್ಲಾಡಳಿತ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೌನಧೋರಣೆಗೆ ಅಂಟಿಕುಳಿತಿರುವುದೇಕೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಡಿ.2ರಂದು ಕರೆಯಲಾಗಿದ್ದ ಜಿಪಂ ವಿಶೇಷ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲು ಚಿಂತಿಸಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಲ್ಪಟ್ಟಿದೆ. ಆದರೂ ಈ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವರಿಂದ ಸ್ಪಂದನೆ ವ್ಯಕ್ತವಾಗಿದ್ದು ಜಾಗ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಪಂ ಸಿಇಒ ಅವರಿಗೂ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಜಿಲ್ಲಾಡಳಿತ ಭವನದಲ್ಲಿ ಪ್ರಾಥಮಿಕ ಹೆಲ್ತ್ ಸೆಂಟರ್ ಕಾರ್ಯಾರಂಭವಾಗಲಿದೆ. ವಿ.ಪ್ರಸಾದ್, ಜಿಪಂ ಅಧ್ಯಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುತ್ತಲೇ ಬಂದಿದ್ದೇವೆ. ಆದರೂ ಜಿಲ್ಲಾಡಳಿತ ಮೌನಮುರಿಯುತ್ತಿಲ್ಲ. ಇಷ್ಟೊಂದು ಸಿಬ್ಬಂದಿ ಕಾರ್ಯನಿರ್ವಹಿಸುವ ಸಾವಿರಾರು ಸಾರ್ವಜನಿಕರು ಬಂದು ಹೋಗುವ ಶಕ್ತಿಸೌಧದಲ್ಲಿ ಕನಿಷ್ಠ ಆರೋಗ್ಯ ಸೇವೆ ದೊರಕಿಸಿಕೊಡದಿದ್ದರೆ ಹೇಗೆ? ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ ಜಿಲ್ಲಾಡಳಿತ ಭವನಕ್ಕೆ ಸಾಕಷ್ಟು ಹಿರಿಯ ನಾಗರಿಕರು ಬಂದು ಹೋಗುತ್ತಾರೆ. ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಯಿಂದ ಬಳಲುವವರು ಅನೇಕರಿದ್ದಾರೆ. ಆರೋಗ್ಯದಲ್ಲಿ ಏರುಪೇರಾದರೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ದೊರೆಯದಿದ್ದರೆ ಹೇಗೆ? ಈ ಬಗ್ಗೆ ಜಿಲ್ಲಾಡಳಿತ ಗಮನ ನೀಡಬೇಕಿದೆ. ನಾಗರಾಜು, ರೈತ ದೇವನಹಳ್ಳಿ ಇಲ್ಲಿನ ಬಹುಪಾಲು ಸಿಬ್ಬಂದಿ ಹೊಸಕೋಟೆ, ನೆಲಮಂಗಲ ಬೆಂಗಳೂರು ಸೇರಿ ದೂರದ ಊರುಗಳಿಂದ ಬಂದು ಹೋಗುತ್ತಾರೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತುರ್ತು ಚಿಕಿತ್ಸೆ ದೊರಕಿಸಿಕೊಡುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಅವಶ್ಯಕತೆ ಇದೆ. ಹೆಸರು ಹೇಳಲಿಚ್ಚಿಸದ ಜಿಲ್ಲಾಡಳಿತ ಸಿಬ್ಬಂದಿ