

ತಿ.ನರಸೀಪುರ : ದುಡಿಮೆಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಕಾರ್ಮಿಕರಿಗೆ ಸಧೃಡ ಆರೋಗ್ಯವಿರಬೇಕು. ವೈದ್ಯಕೀಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮೈಮುಲ್ ಅಧ್ಯಕ್ಷ ಆರ್. ಚಲುವರಾಜು ಸಲಹೆ ನೀಡಿದ್ದಾರೆ.
ತಾಲೂಕಿನ ಕಟ್ಟೆಕೊಪ್ಪಲು ಗ್ರಾಮದಲ್ಲಿ ಶನಿವಾರ ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಬೃಹತ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ತಪಾಸಣೆ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಿರುವುದರಿಂದ ಶ್ರಮಿಕ ವರ್ಗಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಜೀವನ ಶೈಲಿ ಬದಲಾಗಿದ್ದರಿಂದ ಮೂರು ದಶಕಗಳಿಂದ ಕೆಲವು ಜನರಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಸ್ವಾಭಾವಿಕ ಕಾಯಿಲೆಗಳು ಎಲ್ಲರಲ್ಲೂ ಕಾಣಿಸಿಕೊಂಡು ಸಾಮಾನ್ಯ ಜನರನ್ನೂ ಬಾಧಿಸುವುದನ್ನು ನೋಡುತ್ತಿದ್ದೇವೆ. ಆರ್ಥಿಕ ಸಮಸ್ಯೆಯಿಂದ ಕಾರ್ಮಿಕರು ಮತ್ತು ಬಡವರ್ಗದ ಜನರಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಹೊರೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದು ಗ್ರಾಮೀಣ ಭಾಗದಲ್ಲಿ ವರದಾನವಾಗಲಿದೆ ಎಂದು ತಿಳಿಸಿದರು.
ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ ಮಾತನಾಡಿ, ದೊಡ್ಡಮಟ್ಟದ ಚಿಕಿತ್ಸಾ ಶಿಬಿರಗಳು ಯಶಸ್ವಿಯಾಗಿ ನಡೆದ ಬಳಿಕ ಕಟ್ಟೆಕೊಪ್ಪಲು ಮೊದಲಿಗೆ ಗ್ರಾಮದಲ್ಲಿ ಸಂಚಾರಿ ಆರೋಗ್ಯ ಚಿಕಿತ್ಸಾ ಶಿಬಿರವನ್ನು ವಿದ್ಯುಕ್ತವಾಗಿ ಆರಂಭಿಸುತ್ತಿದ್ದೇವೆ ಎಂದರು.
ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರದಲ್ಲಿ ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಲ್ಲದೆ ತಪಾಸಣೆಗೆ ಒಳಗಾದವರಿಗೆ ಮಾರ್ಗದರ್ಶನ ನೀಡಲಾಯಿತು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎ.ಎನ್.ಸ್ವಾಮಿ, ಮಹದೇವಪ್ಪ ಅಭಿಮಾನಿ ಬಳಗ ಜಿಲ್ಲಾಧ್ಯಕ್ಷ ಕಗ್ಗಲೀಪುರ ಕೆ.ಎಂ.ಮಧುಕುಮಾರ್, ಹನುಮನನಾಳು ಡೇರಿ ಅಧ್ಯಕ್ಷ ಮರಿಗೌಡ, ಮೈಮುಲ್ ಮಾಜಿ ನಿರ್ದೇಶಕ ಕೆ.ಬಿ.ಪ್ರಭಾಕರ್, ಮುಖಂಡರಾದ ಶಿವಣ್ಣ, ಬಸನಹಳ್ಳಿ ಮಹೇಂದ್ರ, ಕೃಷ್ಣ, ಕಾರ್ಮಿಕ ಇಲಾಖೆಯ ನಿರೀಕ್ಷಕ ಮಂಜುನಾಥ, ಸದಾನಂದ ಹಾಗೂ ವೈದ್ಯರು ಇದ್ದರು.