

ಮಂಡ್ಯ: ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ನೋಂದಣಿಯನ್ನು ಚುರುಕುಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗ್ರಾಮ ಒನ್ ಫ್ರಾಂಚೈಸಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಈಗಾಗಲೇ ಕಂದಾಯ ಇಲಾಖೆಯ ಸಾಕಷ್ಟು ಕೆಲಸಗಳು ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕವೇ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿವೆ ಎಂದರು.
ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೈತಸಂಪರ್ಕ ಸೇವೆಗಳು, ಸಬ್‌ರಿಜಿಸ್ಟರ್ ಕಚೇರಿ ಕೆಲಸ, ವಿದ್ಯಾರ್ಥಿ ವೇತನದ ಅರ್ಜಿ, ರೆವಿನ್ಯೂ ಸ್ಕೆಚ್ ಹಾಗೂ ದುರಸ್ತಿ ಅರ್ಜಿ ಸೇರಿದಂತೆ ಇನ್ನಿತರ ಸೇವೆಗಳನ್ನು ಗ್ರಾಮ ಒನ್ ಮೂಲಕ ಜನ ಸಾಮಾನ್ಯನರ ಮನೆಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ. ಅದರಂತೆಯೇ ಫ್ರಾಂಚೈಸಿಗಳು ಕೂಡ ಜನಸಾಮಾನ್ಯರಿಗೆ ಕಡಿಮೆ ಅವಧಿಯಲ್ಲಿ ಸೇವೆಯನ್ನು ತ್ವರಿತವಾಗಿ ನೀಡಬೇಕು. ಈ ನಿಟ್ಟಿನಲ್ಲಿ ತಾಂತ್ರಿಕದೋಷ ಹಾಗೂ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಪ್ರಯತ್ನ ಮಾಡಲಾಗುವುದು. ಕಂದಾಯ ಇಲಾಖೆಯ ಅಧಿಕಾರಿಗಳು ಅನಗತ್ಯವಾಗಿ ಫ್ರಾಂಚೈಸಿಗಳ ಅರ್ಜಿಯನ್ನು ತಿರಸ್ಕರಿಸದಂತೆ ಸೂಚಿಸಿದರು.
ಗ್ರಾಮ ಒನ್ ಯೋಜನಾ ನಿರ್ದೇಶಕ ವರಪ್ರಸಾದ್‌ರೆಡ್ಡಿ ಮಾತನಾಡಿ, ಪ್ರಾಂಚೈಸಿಗಳು 850ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದಾರೆ. ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ಯಾವ ರೀತಿ ಸೌಲಭ್ಯ ಒದಗಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಫ್ರಾಂಚೈಸಿಗಳು ಇನ್ನೂ ಉತ್ತಮವಾಗಿ ಕೆಲಸವನ್ನು ನಿರ್ವಹಿಸಬೇಕು. ಇನ್ನಷ್ಟು ಸೇವೆಗಳನ್ನು ಸರ್ಕಾರದಿಂದ ಗ್ರಾಮ ಒನ್ ಮೂಲಕ ನೀಡಲು ಪ್ರಯತ್ನಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂಬುದರ ವಿವರ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರಾದ ಲಕ್ಷ್ಮೀ, ಸಮಾಲೋಚಕಿ ಶ್ವೇತಾರಾಣಿ ಇದ್ದರು.