

ಗದಗ: ಮನುಷ್ಯ ಸಂಪತ್ತನ್ನು ಸುಲಭವಾಗಿ ಗಳಿಸಬಹುದು. ಆದರೆ, ಆರೋಗ್ಯ ಸಂಪತ್ತನ್ನು ಗಳಿಸುವುದು ಸುಲಭವಲ್ಲ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ದಿ. ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬಸವೇಶ್ವರ ನಗರದ ಶಹಪೂರಪೇಟೆಯಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸದಾನಂದ ಪಿಳ್ಳಿ ಅವರು ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಬಸವೇಶ್ವರನಗರದ ಅಭಿವೃದ್ಧಿಗೆ ಅವರ ಕೊಡುಗೆ ವಿಶೇಷವಾಗಿದೆ. ಮೂಲಸೌಲಭ್ಯಗಳನ್ನು ಕಲ್ಪಿಸಿ ಜನಸ್ನೇಹಿ ಆಡಳಿತ ನಡೆಸಿದ್ದರು ಎಂದರು.
ಸುರೇಖಾ ಪಿಳ್ಳಿ ಮಾತನಾಡಿ, ಅರಿವು ಫೌಂಡೇಷನ್‌ನಿಂದ ಹಲವಾರು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಪದಾಧಿಕಾರಿಗಳ ಶ್ರಮವೂ ಇದೆ ಎಂದರು.
ಜಿಲ್ಲಾಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇರಬೇಕು. ಚಿಕ್ಕ ಮಕ್ಕಳು, ವೃದ್ಧರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಬೇಕು. ಅರಿವು ಫೌಂಡೇಷನ್ ವತಿಯಿಂದ ಕಾರ್ಯಕ್ರಮ ನಡೆಸುತ್ತಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಶಿಬಿರದ ಅಧ್ಯಕ್ಷತೆಯನ್ನು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ವಹಿಸಿದ್ದರು. ಶಿವಪುತ್ರಪ್ಪ ಬೇವಿನಮರದ, ಅರುಣ ಮುನವಳ್ಳಿ, ಭೀಮರೆಡ್ಡಿ ಕಿಲಬಣ್ಣವರ, ಸಮಿತಿ ಅಧ್ಯಕ್ಷ ರಾಚೋಟಿ ಹಾಗೂ ಜಿಮ್ಸ್ ಆಸ್ಪತ್ರೆಯ ವೈದ್ಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.