

ಬಸವನಬಾಗೇವಾಡಿ: ಪ್ರತಿಯೊಬ್ಬರು ದೇವರು ಕೊಟ್ಟ ಜೀವನವನ್ನು ಸಾಮರಸ್ಯದಿಂದ ಕಳೆದರೆ ಜೀವನ ಪಾವನವಾಗುತ್ತದೆ. ಜೀವನ ಸಂಪತ್ತಿನ ಮುಂದೆ ಎಲ್ಲ ಸಂಪತ್ತು ನಶ್ವರವಾಗಿದೆ ಎಂದು ಮುದಗಲ್‌ನ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಆಂಗ್ಲಮಾಧ್ಯಮ ಶಾಲೆಯ ನಂದೀಶ್ವರ ರಂಗ ಮಂದಿರದಲ್ಲಿ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ, ರಾಷ್ಟ್ರೀಯ ಬಸವ ಸೈನ್ಯದ ಸಹಯೋಗದಲ್ಲಿ ಶ್ರಾವಣ ಮಾಸದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡ ವಚನ ದರ್ಶನ ಆಧ್ಯಾತ್ಮಕ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರ ವಚನಗಳು ಎಲ್ಲ ಕಾಲಕ್ಕೂ ಜೀವನ ಮಾರ್ಗದರ್ಶಿಯಾಗಿವೆ. ಬಸವೇಶ್ವರರು ಹೇಳಿದಂತೆ ಲೇಸಾಗಿ ಒಂದು ದಿನ ಬದುಕನ್ನು ನಾವು ಸಾಗಿಸಿದರೆ ನಮ್ಮ ಬದುಕು ಸುಂದರವಾಗುತ್ತದೆ. ಬದುಕಿನಲ್ಲಿ ಆಧ್ಯಾತ್ಮಕ ಪ್ರವಚನಗಳು ಧನ್ಯತೆ ತರುತ್ತವೆ. ನಾವು ಅಂತರಂಗದಿಂದ ಮಾತನಾಡುವಂತಾದರೆ ಎಲ್ಲರೂ ಪ್ರೀತಿಯಿಂದ ಕಾಣುತ್ತಾರೆ ಎಂದರು.
ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಕ್ರಾಂತಿಯಿಂದ ಎಂದಿಗೂ ಸಮಾಜ ಬದಲಾಗುವುದಿಲ್ಲ. ಗಾಂಧೀಜಿಯವರ ಶಾಂತಿ ತತ್ವದಿಂದ ಸಮಾಜ ಬದಾವಣೆಯಾಗಲು ಸಾಧ್ಯ. ಗುರು-ವಿರಕ್ತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮುಂಬರುವ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯಲ್ಲಿ ಬಸವೇಶ್ವರರ ರಥೋತ್ಸವ ಜರುಗುವಂತೆ ಮಾಡಿದರೆ ಜಾತ್ರೆಗೆ ಇನ್ನಷ್ಟು ಮೆರಗು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಐದು ದಿನಗಳ ಕಾಲ ಜರುಗಿದ ಬಸವೇಶ್ವರ ಜಾತ್ರಾ ಮಹೋತ್ಸವವ ಎಲ್ಲರ ಸಹಕಾರದಿದ ಯಶಸ್ವಿಯಾಗಿದೆ ಎಂದರು.
ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಜೆ. ಆದಿಗೊಂಡ, ಮುಖಂಡರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಶೇಖರಗೌಡ ಪಾಟೀಲ, ಭರತ ಅಗರವಾಲ, ಸಂಗಣ್ಣ ಕಲ್ಲೂರ, ಶೇಖರ ಗೊಳಸಂಗಿ, ಶ್ರೀಧರ ಕುಂಬಾರ, ವಿಶ್ವನಾಥ ಹಿರೇಮಠ, ಸುಭಾಸ ಗಾಯಕವಾಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ರವಿ ರಾಠೋಡ ಇತರರಿದ್ದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಎಚ್.ಬಿ. ಬಾರಿಕಾಯಿ ನಿರೂಪಿಸಿ, ವಂದಿಸಿದರು.