ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ತರಬೇತಿ

mng-26 Aug Homeguards
Published on

ಮಂಗಳೂರು: ನಗರದ ಮೇರಿಹಿಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಎರಡನೇ ಹಂತದ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ಶಿಬಿರ ಶುಕ್ರವಾರ ಜರುಗಿತು.


ರೋಟರಿ ಕ್ಲಬ್ ಹಿಲ್‌ಸೈಡ್ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಜೀವರಕ್ಷಾ ಟ್ರಸ್ಟ್, ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಇದರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಇದರ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಸುಮಾರು 15 ಮಂದಿ ಗೃಹರಕ್ಷಕರು ಮತ್ತು 5 ಮಂದಿ ಪೌರರಕ್ಷಣಾ ತಂಡದ ಕಾರ‌್ಯಕರ್ತರು ಭಾಗವಹಿಸಿದ್ದರು.


ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಜನರ ಜೀವ ಉಳಿಸಲು ಗೃಹರಕ್ಷಕರನ್ನು ತರಬೇತಿಗೊಳಿಸಿ ಅವರನ್ನು ಜೀವರಕ್ಷಕರನ್ನಾಗಿ ತಯಾರಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ. ಅಪಘಾತ ಅಥವಾ ಇನ್ಯಾವುದೇ ಅವಘಡಗಳಾದಾಗ ತಕ್ಷಣವೇ ಸ್ಪಂಧಿಸಲು ಈ ತರಬೇತಿ ಗೃಹರಕ್ಷಕರಿಗೆ ಅನುಕೂಲವಾಗುತ್ತದೆ ಎಂದರು.


ಜೀವರಕ್ಷಾ ಟ್ರಸ್ಟ್ ಇದರ ಮಂಗಳೂರು ವಲಯದ ಅಧಿಕಾರಿ ಡಾ.ಕಿಶನ್ ರಾವ್ ಬಾಳಿಲ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಎಲ್ಲ ಕಡೆಗಳಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಈ ಸಂದರ್ಭದಲ್ಲಿ ವೈದ್ಯರು ಬರುವವರೆಗೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಜನಸಾಮಾನ್ಯರಿಗೆ ತರಬೇತಿ ಅತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಗೃಹರಕ್ಷಕರಿಗೆ ಈ ತರಬೇತಿ ಆಯೋಜಿಸಲಾಗಿದೆ ಎಂದರು.


ರೋಟರಿ ಕ್ಲಬ್ ಹಿಲ್‌ಸೈಡ್ ಮಂಗಳೂರು ಇದರ ಅಧ್ಯಕ್ಷ ಶ್ಯಾಮ್‌ಲಾಲ್, ಸದಸ್ಯರಾದ ಅಶೋಕ್ ರಾವ್, ಎಸ್.ವಿ.ಎಸ್. ವರ್ಮ, ವೀಣಾ, ಶ್ಯಾಮಲಾಲ್, ರಂಗನಾಥ ಕಿಣಿ ಉಪಸ್ಥಿತರಿದ್ದರು.


ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ನಮ್ರತಾ ಶೆಟ್ಟಿ ಮತ್ತು ಡಾ.ನಿಶಾಂತ್ ಕೃಷ್ಣ ಭಾಗವಹಿಸಿದ್ದರು. ಫಾದರ್ ಮುಲ್ಲರ್ ಆಸ್ಪತ್ರೆಯ ಗೃಹ ವೈದ್ಯರಾದ ಡಾ. ಜಸ್ಟಿನ್ ಮತ್ತು ಡಾ.ಗಾಯತ್ರಿ ರಬೇತಿಗೆ ಸಹಕರಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ರೋಟರಿ ಕ್ಲಬ್ ಹಿಲ್‌ಸೈಡ್ ಸದಸ್ಯ ಪ್ರವೀಣ್ ಉಡುಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net