ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ: ಸ್ಪರ್ಧೆ ಸಮಾರೋಪದಲ್ಲಿ ಡಾ.ಪ್ರಶಾಂತ ಶೆಟ್ಟಿ ಅಭಿಮತ

ujire
Published on

ಬೆಳ್ತಂಗಡಿ: ಮಕ್ಕಳು ಎಳವೆಯಲ್ಲೇ ನಿತ್ಯ ಯೋಗಾಭ್ಯಾಸ ಮಾಡಿದರೆ ಅವರ ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಿಕೊಂಡು ಆರೋಗ್ಯವಂತರಾಗಬಹುದು ಎಂದು ಉಜಿರೆ ಶ್ರೀ ಧ.ಮಂ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ ಹೇಳಿದರು.

ಉಜಿರೆ ಶ್ರೀ ಧ.ಮಂ.ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಣ ಮತ್ತು ದ.ಕ. ಜಿ.ಪಂ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ, ಉಜಿರೆಯ ಶ್ರೀ ಧ.ಮಂ.ಅ.ಸೆಕೆಂಡರಿ ಶಾಲೆ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಯೋಗಾಸನ ಸ್ಪರ್ಧೆ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಫಲಕ ವಿತರಿಸಿ ಮಾತನಾಡಿದರು.

ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ.ವೈ. ಮಾತನಾಡಿದರು. 17 ಹಾಗೂ 14ರ ವಯೋಮಾನದ ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ವೈಯಕ್ತಿಕ ಹಾಗೂ ತಂಡ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಉಜಿರೆ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ.ಸೋಮಶೇಖರ್ ಶೆಟ್ಟಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣ ಸಂಯೋಜಕಿ ಚೇತನಾಕ್ಷಿ, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆ ಕ್ರೀಡಾ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ರಾಷ್ಟ್ರೀಯ ಯೋಗ ತೀರ್ಪುಗಾರರಾದ ಶೇಖರ ಕಡ್ತಲ ಹಾಗೂ ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ಬೆಳಾಲು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸುರೇಶ್ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ ಬಿ. ವಂದಿಸಿದರು. ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ, ಮೂಡುಬಿದಿರೆ ಪ್ರಥಮ

17ರ ವಯೋಮಾನದ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು, ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕು, 14ರ ವಯೋಮಾನದ ವಿಭಾಗದ ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕು ಹಾಗೂ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕು ತಂಡ ಪ್ರಶಸ್ತಿ ಪಡೆಯಿತು. ಯೋಗಕುಮಾರನಾಗಿ 17ರ ವಯೋಮಾನದ ವಿಭಾಗದಲ್ಲಿ ಚೊಕ್ಕಾಡಿ ಶಾಲೆಯ ಮರ್ಮೇಬ್ಯಾಂಕ್, 14 ರ ವಯೋಮಾನದ ವಿಭಾಗದಲ್ಲಿ ಕಾಣಿಯೂರು ಶಾಲೆಯ ಮೋನಿಶ್ ಟಿ., ಯೋಗ ಕುಮಾರಿಯಾಗಿ 17ರ ವಯೋಮಾನದ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್‌ನ ಜಯಲಕ್ಷ್ಮೀ, 14ರ ವಯೋಮಾನದ ವಿಭಾಗದಲ್ಲಿ ಕಾಣಿಯೂರು ಶಾಲೆಯ ಶ್ರೀಮಾ ಕೆ.ಎಚ್. ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net