

ಮಂಡ್ಯ: ಜಿಲ್ಲೆಯ ವಿವಿಧೆಡೆ ಕಬ್ಬು ಕಟಾವು ಮಾಡಲೆಂದು ಬಳ್ಳಾರಿ, ಮಹಾರಾಷ್ಟ್ರ, ವಿಜಯಪುರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿರುವ ಶ್ರಮಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವ ಮೂಲಕ ಡಾ.ಅನಿಲ್ ಆನಂದ್ ಡ್ರೀಮ್ ವರ್ಕ್ಸ್ ತಂಡ ಮಾದರಿಯಾಗಿದೆ.
ಕಬ್ಬು ಕಟಾವಿಗೆ ಬಂದಿರುವ ನೂರಾರು ಶ್ರಮಿಕರು ತಾಲೂಕಿನ ಹನಿಯಂಬಾಡಿ ಸುತ್ತಮುತ್ತ ತಾಂಡಾಗಳಲ್ಲಿ ನೆಲೆಯೂರಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಕಬ್ಬು ಕಟಾವಿನಲ್ಲಿ ತೊಡಗಿ ರಾತ್ರಿ ಗೂಡು ಸೇರಿಕೊಳ್ಳುವ ಶ್ರಮಿಕರು ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದೇ ಇಲ್ಲ. ಅಂತಹ ಜನರ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ನ್ಯೂರೋ ಸೈಕಿಯಾಟ್ರಿಸ್ಟ್ ಡಾ.ಅನಿಲ್ ಆನಂದ್ ಅವರು ತಾಲೂಕಿನ ಹನಿಯಂಬಾಡಿ ಬಳಿಯ ತಾಂಡಾದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದರು. ಮಾತ್ರವಲ್ಲದೆ ಶ್ರಮಿಕರಿಗೆ ಔಷಧ ಕಿಟ್‌ಗಳನ್ನು ವಿತರಿಸಿದರು.
ತುರ್ತು ಸಂದರ್ಭದಲ್ಲಿ ಕೂಲಿಕಾರರಿಗೆ ನೆರವಿಗೆ ಬರಬೇಕೆಂಬ ಉದ್ದೇಶದಿಂದ ನೂರಾರು ಕುಟುಂಬಗಳಿಗೆ ಔಷಧ ಕಿಟ್ ವಿತರಿಸಲಾಯಿತು. ಈ ಔಷಧ ಕಿಟ್ ನೋವು ನಿವಾರಕಗಳು, ಆ್ಯಂಟಿಸೆಪ್ಟಿಕ್ ಕ್ರೀಮ್, ಅಲರ್ಜಿ ಮಾತ್ರೆಗಳನ್ನು ಒಳಗೊಂಡಿದೆ. ವಾಹನದಲ್ಲೇ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಅವರು ಹಲವು ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿದರು. ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ಮಾತನಾಡಿದ ಡಾ.ಅನಿಲ್ ಆನಂದ್, ಶ್ರಮ ಜೀವಿಗಳಲ್ಲಿರುವ ನಿಸ್ವಾರ್ಥ ಭಾವ, ಪ್ರಾಮಾಣಿಕತೆ, ತೃಪ್ತಿ ಮತ್ತು ಸಂತಸದ ಮನಸ್ಥಿತಿಯೇ ಅವರ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಶ್ರಮ ಜೀವನದ ನಡುವೆ ಉತ್ತಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ಶ್ರಮದ ದುಡಿಮೆ ಹಲವು ರೋಗಗಳನ್ನು ದೂರ ಮಾಡುತ್ತದೆ. ಆದರೂ ಆರೋಗ್ಯವನ್ನು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಪುಟ್ಟ ಮಕ್ಕಳೂ ತಾಂಡಾದಲ್ಲಿದ್ದು ಅವರೂ ಆರೋಗ್ಯವಂತರಾಗಿರುವಂತೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.
ಆರೋಗ್ಯ ಶಿಬಿರದಲ್ಲಿ ದರ್ಶನ್, ನವೀನ್, ಮಂಜು, ರಕ್ಷಿತ್, ಅನುಷಾ, ಧನುಷ್, ಸಂದೀಪ್, ಚೇತನ್, ವಿನಯ್ ಪಾಲ್ಗೊಂಡಿದ್ದರು. ರಾತ್ರಿ ತಾಂಡಾ ಜನರೊಂದಿಗೆ ಸಾಮೂಹಿಕ ಭೋಜನ ಮಾಡಲಾಯಿತು.