

ಮೊಳಕಾಲ್ಮೂರು: ಪರಿಸರದಲ್ಲಿ ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಸುರಕ್ಷತೆ ಕಾಣಲು ಸಾಧ್ಯ ಎಂದು ಪಪಂ ಮುಖ್ಯಾಧಿಕಾರಿ ಇ.ಲೀಲಾವತಿ ತಿಳಿಸಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಚ್ಛಾ ಅಮೃತ ಮಹೋತ್ಸವ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನ ಮತ್ತು ಮನೆ ಹಾಗೂ ನೆರೆಹೊರೆಯಲ್ಲಿ ಆರೋಗ್ಯ ಪೂರ್ಣ ವಾತಾವರಣಕ್ಕೆ ಸರ್ವರೂ ಕೈಜೋಡಿಸಿದರೆ ರೋಗ ಮುಕ್ತ ಜೀವನ ಸಾಧ್ಯ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಅಥವಾ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿ, ಚರಂಡಿಗೆ ಹಾಕದೆ ಕಸ ಸಂಗ್ರಹ ವಾಹನಕ್ಕೆ ಹಾಕಬೇಕು ಎಂದು ಕೋರಿದರು.
ಆರೋಗ್ಯ ಸಹಾಯಕ ಶ್ರೀನಿವಾಸ್ ಮಾತನಾಡಿ, ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದೆ ಇರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಬೇಸರಿಸಿದರು.
ಶಾಲಾ, ಕಾಲೇಜ್, ಬಸ್ ನಿಲ್ದಾಣ ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಗುಟ್ಖಾ, ಮದ್ಯಪಾನ ಅಪರಾಧವಾಗಿದೆ. ಈ ಸಂಬಂಧ ಪದೇ ಪದೆ ಎಚ್ಚರಿಕೆ ನೀಡಿದರೂ ಜನರ ಉಡಾಫೆ ಹೆಚ್ಚುತ್ತಿದೆ. ಇನ್ಮುಂದೆ ದಂಡದ ಜತೆಗೆ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರು ಪಡಿಸುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
ಕಾರ್ಮಿಕರಾದ ಮರಿಸ್ವಾಮಿ, ಚಂದ್ರಪ್ಪ, ನಿಸ್ಸಾರ್ ಅಹಮದ್, ವಹಾಂತೇಶ್, ರವಿಕುಮಾರ, ತಿಪ್ಪೇಸ್ವಾಮಿ, ತುಪ್ಪದಮ್ಮ, ಓಬಕ್ಕ, ಗಂಗಮ್ಮ, ಮಲ್ಲಮ್ಮ, ತಿಮ್ಮಕ್ಕ, ಷಪಿವುಲ್ಲಾ ಸೈಯದ್ ಇದ್ದರು.