

ರಬಕವಿ-ಬನಹಟ್ಟಿ: ಗುಣಮಟ್ಟದ ಪ್ರೋಟೀನ್‌ಯುಕ್ತ ಆಹಾರ ಕೊರತೆಯಿಂದ ಅಧಿಕ ಮಕ್ಕಳು ಮತ್ತು ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಉತ್ತಮ ಆಹಾರ ಸೇವನೆಯಿಂದ ಮಾತ್ರ ಆರೋಗ್ಯ ಪಡೆದುಕೊಳ್ಳಲು ಸಾಧ್ಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಸಭಾಭವನದಲ್ಲಿ ವಿಶ್ವ ಐದನೇ ಆಹಾರ ಸುರಕ್ಷತಾ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳಿಗೆ ಉತ್ತಮ ಆರೋಗ್ಯದ ಆಹಾರದ ಕುರಿತ ಒಂದು ದಿನದ ಚಿಂತನೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ಆಧಾರದನ್ವಯ ಒಂದು ದಿನದಲ್ಲಿ ಸರಾಸರಿ 1.60 ಲಕ್ಷ ಜನರು ಅಸುರಕ್ಷಿತ ಆಹಾರದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಸರಾಸರಿ 340 ಮಕ್ಕಳು ಕೇವಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಹಾರದಿಂದ ತಡೆಗಟ್ಟಬಹುದಾದ ರೋಗಳಿಂದ ಮೃತಪಡುತ್ತಿದ್ದಾರೆಂದು ಡಬ್ಲೂಎಚ್‌ಒ ಸಂಸ್ಥೆ ಹೇಳುತ್ತದೆ. ಅಲ್ಲದೆ, ಪ್ರತಿ ವರ್ಷ 10ರಲ್ಲಿ ಒಬ್ಬರು ಅರಸುರಕ್ಷಿತ ಆಹಾರ ಸೇವನೆಯಿಂದ ಅತೀ ಹೆಚ್ಚು ಭಾದೆಗೆ ಒಳಗಾಗುತ್ತಿದ್ದಾರೆ ಎಂದರು.
ತಪ್ಪಲು ಪಲ್ಲೆ, ಪ್ರೋಟೀನ್, ಫೈಬರ್, ಮಿನರಲ್ಸ್ ಸೇರಿ ಎಲ್ಲ ತಹರದ ಪೋಷಕಾಂಶ ಉಳ್ಳ ಹಣ್ಣು ಹಂಪಲ ಮತ್ತು ಜೀವ ಭರಿತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮನುಷ್ಯನಲ್ಲಿ ಶಕ್ತಿ ವೃದ್ಧಿಯಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಉತ್ತಮ ಆರೋಗ್ಯಕ್ಕೆ ನಿತ್ಯ ಯೋಗ, ವೈಜ್ಞಾನಿಕವಾಗಿ ನಿತ್ಯ ನೀರು ಕುಡಿಯುವುದು, ಹಸಿವಾದ ಬಳಿಕ ಊಟ ಮಾಡಿ ಇನ್ನೂ ಹಸಿವಿರುವಾಗಲೇ ಊಟ ಬಿಡುವುದು ಆರೋಗ್ಯದ ಗುಟ್ಟಾಗಿವೆ ಎಂದು ಶ್ರೀಗಳು ತಿಳಿಸಿದರು. ಕಾರ್ಯಾಗಾರದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.